Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಗುಡ್ಡೆಹೊಸೂರಿನಲ್ಲಿ ಡಿಸಿಸಿ ಬ್ಯಾಂಕ್‌ನ 27ನೇ ಶಾಖೆಯ ನೂತನ ಕಟ್ಟಡದ ಶುಭಾರಂಭ; ಮೊದಲ ದಿನವೇ ₹3.65 ಕೋಟಿ ಠೇವಣಿ

by Kodagu Varadi•ಅಕ್ಟೋಬರ್ 12, 2026BREAKING
ಗುಡ್ಡೆಹೊಸೂರಿನಲ್ಲಿ ಡಿಸಿಸಿ ಬ್ಯಾಂಕ್‌ನ 27ನೇ ಶಾಖೆಯ ನೂತನ ಕಟ್ಟಡದ ಶುಭಾರಂಭ; ಮೊದಲ ದಿನವೇ ₹3.65 ಕೋಟಿ ಠೇವಣಿ

ಗುಡ್ಡೆಹೊಸೂರು, ಅ.12: ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದ್ದರೂ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸದೆ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಸ್ಪಷ್ಟಪಡಿಸಿದರು. ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲಿ ಆರಂಭವಾದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಮಡಿಕೇರಿ ಇದರ 27ನೇ ಶಾಖೆಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಹಕಾರ ರತ್ನ ಪುರಸ್ಕೃತರೂ, ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಬೆಂಗಳೂರು ಇದರ ನಿರ್ದೇಶಕರೂ ಆದ ಗಣಪತಿ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ದೀಪಾವಳಿ ಹಾಗೂ ಹುತ್ತರಿ ಹಬ್ಬದ ನಂತರದ ದಿನಗಳಲ್ಲಿ ಠೇವಣಿಯ ಮೇಲಿನ ಬಡ್ಡಿದರವನ್ನು 15ರಿಂದ 20 ಪೈಸೆಗಳಷ್ಟು ಹೆಚ್ಚುವರಿಯಾಗಿ ನೀಡಲು ಬ್ಯಾಂಕ್ ನಿರ್ಧರಿಸಿದೆ ಎಂದು ತಿಳಿಸಿದರು. ಗುಡ್ಡೆಹೊಸೂರಿನಲ್ಲಿ ಶಾಖೆ ಆರಂಭವಾಗಿರುವುದು ಕೊಡಗಿನ ಜನತೆ ಡಿಸಿಸಿ ಬ್ಯಾಂಕ್ ಮೇಲೆ ಇಟ್ಟಿರುವ ವಿಶ್ವಾಸದ ಪ್ರತೀಕ ಎಂದು ಅವರು ಬಣ್ಣಿಸಿದರು. ಶಾಖೆ ಆರಂಭವಾದ ಮೊದಲ ದಿನವೇ ಗ್ರಾಹಕರು ಕೋಟ್ಯಂತರ ರೂಪಾಯಿ ಠೇವಣಿ ಇರಿಸಿರುವುದು ಬ್ಯಾಂಕಿನ ಮೇಲಿನ ಜನರ ನಂಬಿಕೆಗೆ ಸಾಕ್ಷಿ ಎಂದರು. ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘ, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕುಶಾಲನಗರದ ಕೈಗಾರಿಕೋದ್ಯಮಿಗಳು ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘಗಳು ತಲಾ ₹1 ಕೋಟಿಯಂತೆ ₹3 ಕೋಟಿ ಠೇವಣಿ ಇರಿಸಿವೆ. ಉಳಿದ ಗ್ರಾಹಕರು ₹65 ಲಕ್ಷ ಠೇವಣಿ ಇರಿಸಿದ್ದು, ಒಟ್ಟು ₹3.65 ಕೋಟಿ ಠೇವಣಿ ಮೊದಲ ದಿನವೇ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ ಅವರು, ಎಲ್ಲ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು. ಈ ಶಾಖೆಯು ಸುತ್ತಲಿನ ಗ್ರಾಮೀಣ ಜನರು ಹಾಗೂ ಕೃಷಿಕರಿಗೆ ಬ್ಯಾಂಕಿಂಗ್ ಸೇವೆ ಒದಗಿಸಲು ಸಹಕಾರಿಯಾಗಲಿದೆ ಎಂದು ಗಣಪತಿ ಅಭಿಪ್ರಾಯಪಟ್ಟರು. ಇದೇ ಸಂದರ್ಭ ಬ್ಯಾಂಕ್ ಶಾಖೆಯಲ್ಲಿ ಸ್ಟ್ರಾಂಗ್ ರೂಂ ಮತ್ತು ನಗದು ಕೌಂಟರ್‌ಗೆ ಚಾಲನೆ ನೀಡಿದರು. ಈ ಸಂದರ್ಭ ಐಪಿಎಂಸಿಎಸ್ ಮತ್ತು ಪ್ಯಾಕ್ಸ್ ಅಧ್ಯಕ್ಷ ಟಿ .ಆರ್. ಶರವಣ ಕುಮಾರ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಿ.ಎಂ. ಸಾಗರ್, ಡಿಸಿಸಿ ಬ್ಯಾಂಕ್ ಸಂಸ್ಥಾಪಕ ಕುಟುಂಬದ ನಾಲ್ಕನೇ ತಲೆಮಾರಿನ ದೇವಯ್ಯ, ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎನ್. ಕಾಶಿ ಹಾಗೂ ಪದಾಧಿಕಾರಿಗಳು, ಶಾಖೆಯ ವ್ಯವಸ್ಥಾಪಕರಾದ ಬಲರಾಮ್, ಹಿರಿಯ ಸಹಾಯಕ ಜಯಪ್ರಕಾಶ್ ಮತ್ತು ಶಾಖೆಯ ಸಿಬ್ಬಂದಿ, ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳು, ಗ್ರಾಹಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಗುಡ್ಡೆಹೊಸೂರಿನಲ್ಲಿ ಡಿಸಿಸಿ ಬ್ಯಾಂಕ್‌ನ 27ನೇ ಶಾಖೆಯ ನೂತನ ಕಟ್ಟಡದ ಶುಭಾರಂಭ; ಮೊದಲ ದಿನವೇ ₹3.65 ಕೋಟಿ ಠೇವಣಿ image 3ಗುಡ್ಡೆಹೊಸೂರಿನಲ್ಲಿ ಡಿಸಿಸಿ ಬ್ಯಾಂಕ್‌ನ 27ನೇ ಶಾಖೆಯ ನೂತನ ಕಟ್ಟಡದ ಶುಭಾರಂಭ; ಮೊದಲ ದಿನವೇ ₹3.65 ಕೋಟಿ ಠೇವಣಿ image 4

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!