ಕುಶಾಲನಗರ, ಅ.25: ಪಟ್ಟಣದ ಕೊಪ್ಪ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಯನ್ನು ಮುಚ್ಚಿ ಪೇವರ್ ಬ್ಲಾಕ್‌ಗಳನ್ನು ಅಳವಡಿಸಿರುವ ಕಟ್ಟಡ ಮಾಲೀಕರಿಗೆ, ಅವುಗಳನ್ನು ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ನೋಟಿಸ್ ಜಾರಿ ಮಾಡಿದೆ. ಅ.23ರಂದು ಸುರಿದ ಭಾರೀ ಮಳೆಯಿಂದಾಗಿ ಕುಶಾಲನಗರ ಪಟ್ಟಣ ವ್ಯಾಪ್ತಿಯ ಹೆದ್ದಾರಿಯ ಮೇಲೆಲ್ಲಾ ನೀರು ಹರಿದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಇದರ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದಾಗ, ರಸ್ತೆಯ ಮಳೆನೀರು ಸರಾಗವಾಗಿ ಹರಿದುಹೋಗಲು ನಿರ್ಮಿಸಲಾಗಿದ್ದ ಚರಂಡಿಯನ್ನು ಮುಚ್ಚಿ, ಕಟ್ಟಡದ ಮುಂಭಾಗದಲ್ಲಿ ಹಾಗೂ ರಸ್ತೆಯ ಬದಿಗಳಲ್ಲಿ ವಾಹನ ನಿಲುಗಡೆಗಾಗಿ ಪೇವರ್ ಬ್ಲಾಕ್‌ಗಳನ್ನು ಅಳವಡಿಸಿರುವುದು ಕಂಡುಬಂದಿದೆ. ಚರಂಡಿಯನ್ನು ಅನಧಿಕೃತವಾಗಿ ಮುಚ್ಚಿರುವುದರಿಂದ ರಸ್ತೆಯ ಮಳೆನೀರು ಚರಂಡಿಗೆ ಹರಿಯಲು ಅಡ್ಡಿಯಾಗಿದ್ದು, ಇದರಿಂದ ಹೆದ್ದಾರಿ ರಸ್ತೆಗೆ ಹಾನಿಯಾಗುತ್ತಿದೆ ಹಾಗೂ ಸುಗಮ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ನೋಟಿಸ್ ತಲುಪಿದ 7 ದಿನಗಳೊಳಗೆ ಚರಂಡಿಯ ಮೇಲೆ ಹಾಗೂ ರಸ್ತೆಯ ಬದಿಗಳಲ್ಲಿ ಅಳವಡಿಸಿರುವ ಪೇವರ್ ಬ್ಲಾಕ್‌ಗಳನ್ನು ತೆರವುಗೊಳಿಸಿ, ಮಳೆನೀರು ಸರಾಗವಾಗಿ ಹರಿಯುವಂತೆ ಚರಂಡಿಯನ್ನು ಮೂಲ ಸ್ಥಿತಿಗೆ ಮರುಸ್ಥಾಪಿಸಬೇಕು. ತಪ್ಪಿದಲ್ಲಿ, ಯಾವುದೇ ಹೆಚ್ಚುವರಿ ನೋಟಿಸ್ ನೀಡದೆ, ಅನ್ವಯವಾಗುವ ನಿಯಮ ಮತ್ತು ಕಾನೂನುಗಳ ಪ್ರಕಾರ ಇಲಾಖೆಯೇ ತೆರವು ಕಾರ್ಯ ನಡೆಸಲಿದ್ದು, ಇದಕ್ಕೆ ತಗಲುವ ವೆಚ್ಚವನ್ನು ಮಾಲೀಕರಿಂದಲೇ ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ವಿಷಯವನ್ನು ತುರ್ತು ಎಂದು ಪರಿಗಣಿಸಿ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ. ವರದಿ ✍️ದಾವುದ್ ಸ್ಥಾಪಕ ಅಧ್ಯಕ್ಷರು, ಕೊಡಗು ಜನ ಅಭಿವೃದ್ದಿ ಸಮಿತಿ,


ಕಾಮೆಂಟ್‌ಗಳು (0)