ಮಡಿಕೇರಿ, ಅ.17: ಡೊಳ್ಳಿನ ನಾದ, ವೀರಗಾಸೆಯ ಗತ್ತು, ಕರಡಿ ಮಜಲಿನ ಕುಣಿತ, ಕೊಡವ ಹಾಗೂ ಅರೆಭಾಷೆ ಜಾನಪದದ ಸೊಬಗು... ದಸರಾ ಸಂಭ್ರಮದ ನಡುವೆ ಮಡಿಕೇರಿ ನಾಳೆ (ಭಾನುವಾರ, ಅ.18) ಜಾನಪದ ಕಲೆಗಳ ಹಬ್ಬಕ್ಕೆ ಸಾಕ್ಷಿಯಾಗಲಿದೆ. ಮಡಿಕೇರಿ ನಗರ ದಸರಾ ಸಮಿತಿ ಹಾಗೂ ದಸರಾ ಸಾಂಸ್ಕೃತಿಕ ಸಮಿತಿ ಸಹಯೋಗದಲ್ಲಿ, ಕೊಡಗು ಜಾನಪದ ಪರಿಷತ್ ವತಿಯಿಂದ ಆರನೇ ವರ್ಷದ ‘ಜಾನಪದ ದಸರಾ–2026’ ಆಯೋಜನೆಗೊಂಡಿದೆ. ನಾಳೆ ಬೆಳಿಗ್ಗೆ 9 ಗಂಟೆಗೆ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಗಾಂಧಿ ಮೈದಾನದವರೆಗೆ ವಿವಿಧ ಜಾನಪದ ತಂಡಗಳು ಕಲಾ ಜಾಥಾದಲ್ಲಿ ಹೆಜ್ಜೆ ಹಾಕಲಿವೆ. ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಜಾಥಾಗೆ ಚಾಲನೆ ನೀಡಲಿರುವರು ಬೆಳಿಗ್ಗೆ 10 ಗಂಟೆಗೆ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯುವ ಸಮಾರಂಭವನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸುವರು. ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅಧ್ಯಕ್ಷತೆ ವಹಿಸುವ ಈ ಕಾರ್ಯಕ್ರಮದಲ್ಲಿ ಕೃಷಿ ಸಚಿವರೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪಿ.ಎಂ. ನರೇಂದ್ರಸ್ವಾಮಿ ಶುಭ ಹಾರೈಸಲಿದ್ದಾರೆ. ಹಾಗೂ ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್ ಜಾನಪದ ವಸ್ತು ಪ್ರದರ್ಶನವನ್ನು ಉದ್ಘಾಟಿಸುವರು. ಡೊಳ್ಳುಕುಣಿತ, ಪೂಜಾ ಕುಣಿತ, ವೀರಗಾಸೆ, ಕರಡಿ ಮಜಲು, ರಂಗ ಕುಣಿತ, ಕೊಡವ ಜಾನಪದ, ಅರೆಭಾಷೆ ಸ್ವರಮಾಲೆ, ಜಾನಪದ ಜಾಗೃತಿ ನಾಟಕ ಹಾಗೂ ಜಾನಪದ ಗೀತ ಗಾಯನ ಕಾರ್ಯಕ್ರಮಗಳು ನಡೆಯಲಿವೆ. ನಾಳೆಯ ಈ ಜಾನಪದ ಹಬ್ಬದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ನಗರ ದಸರಾ ಸಮಿತಿ ಅಧ್ಯಕ್ಷೆ ಪಿ. ಕಲಾವತಿ, ಎಸ್ಪಿ ಬಿಂದುಮಣಿ, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಕಾನೂನು ಸಲಹೆಗಾರ ಲೋಕೇಶ್ ಕುಮಾರ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಉದ್ಯಮಿಗಳಾದ ಶರಣ್ ಪೂಣಚ್ಚ ಅವರೆಮಾದಂಡ, ನಾಪಂಡ ಮುತ್ತಪ್ಪ, ಪೊನ್ನಚ್ಚನ ಮೋಹನ್, ಜಯಂತಿ ಶೆಟ್ಟಿ, ಕುಕ್ಕೇರ ಜಯ ಚಿಣ್ಣಪ್ಪ, ಸಮಾಜ ಸೇವಕ ಎಡಿಕೇರಿ ಪ್ರಸನ್ನ, ಜಾನಪದ ಗಾಯಕರಾದ ಉಮೇಶ್ ಹಾಗೂ ರಿಕ್ಕಿ ಮುತ್ತಪ್ಪ ಗೌರವ ಅತಿಥಿಗಳಾಗಿ ಭಾಗವಹಿಸುವರು. ಹಾಗೂ ನಗರ ದಸರಾ ಸಮಿತಿಯ ಮಹೇಶ್ ಜೈನಿ, ಬಿ.ಕೆ. ಅರುಣ್ ಕುಮಾರ್, ಅರುಣ್ ಶೆಟ್ಟಿ, ಸಬಿತಾ ಹಾಗೂ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಉಪಸ್ಥಿತರಿರುವರು. ಈ ಜಾನಪದ ದಸರಾ ಕಾರ್ಯಕ್ರಮಕ್ಕೆ ಎಲ್ಲಾ ಕಲಾಭಿಮಾನಿಗಳು ಹಾಗೂ ಸಾರ್ವಜನಿಕರನ್ನು ಕೊಡಗು ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಅವರು ಪ್ರಕಟಣೆಯ ಮೂಲಕ ಆದರದಿಂದ ಆಮಂತ್ರಿಸಿದ್ದಾರೆ.
ಕಲೆ, ಕುಣಿತ, ಗೀತೆಗಳ ಜಾನಪದ ಹಬ್ಬಕ್ಕೆ ಮಡಿಕೇರಿ ಸಜ್ಜು: ನಾಳೆ ಗಾಂಧಿ ಮೈದಾನದಲ್ಲಿ ಜಾನಪದ ದಸರಾ
by Kodagu Varadi•ಅಕ್ಟೋಬರ್ 17, 2026BREAKING

ಕಾಮೆಂಟ್‌ಗಳು (0)