ನಾಪೋಕ್ಲು: ಅವಂದೂರಿನ ಗ್ರಾಮದ ಶ್ರೀ ಗೋಪಾಲಕೃಷ್ಣ, ಈಶ್ವರ-ಶಾಸ್ತಾವು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಶ್ರೀ ಗೋಪಾಲಕೃಷ್ಣ ಯುವ ಸಂಘ (ರಿ) ಇವುಗಳ ಜಂಟಿ ಆಶ್ರಯದಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯ, ಸನ್ಮಾನ ಪುರಸ್ಕಾರ ಹಾಗೂ ಸಾಂಪ್ರದಾಯಿಕ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧಾ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶಾಸಕರು, "ಕೋವಿ ಸಂಸ್ಕೃತಿಯು ಕೊಡಗಿನ ಪ್ರತಿಯೊಬ್ಬರ ಹೆಮ್ಮೆ ಹಾಗೂ ಪ್ರತಿಷ್ಠೆಯ ಸಂಕೇತವಾಗಿದೆ. ಕೊಡಗಿನ ಜನರ ನಿತ್ಯಜೀವನದಲ್ಲಿ ಕೋವಿ ಎಂಬುದು ಒಂದು ಅವಿಭಾಜ್ಯ ಅಂಗ. ಇಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳು ಸಮುದಾಯದ ಪ್ರತಿಯೊಬ್ಬರನ್ನು ಒಂದೆಡೆ ಸೇರಿಸಿ ಒಗ್ಗಟ್ಟು ಮೂಡಿಸಲು ಸಹಕಾರಿಯಾಗಿವೆ. ಕೃಷಿ ಚಟುವಟಿಕೆಗಳ ನಿರಂತರ ಒತ್ತಡದಲ್ಲೂ ಜನರಿಗೆ ಇಂತಹ ಸ್ಪರ್ಧೆಗಳು ಮನರಂಜನೆ ಹಾಗೂ ಹೊಸ ಉತ್ಸಾಹ ನೀಡುತ್ತವೆ," ಎಂದು ಬಣ್ಣಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ದೇಯನ್ನು ಉದಯ ವಿದ್ಯಾ ಸಂಸ್ಥೆಯ ನಿವೃತ್ತ ಮುಖ್ಯೋಪ ದ್ಯಾಯ ಕೊಡುಗೈ ದಾ ಗಳಾದ ಕೆದಂಬಾಡಿ ಪುಟ್ಟಯ್ಯ ನವರು ಉದ್ಘಾಟನೆ ಮಾಡಿ ನವರಾತ್ರಿ ಉತ್ಸವದ ಬಗ್ಗೆ ಬೆಳಕು ಚೆಲ್ಲಿ ಆಯೋಜಕರ ಬಗ್ಗೆ ಪ್ರಸಂಸ್ಥೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಅವಂದೂರು ಬಳಿಯ ಸರಕಾರಿ ಆಟದ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾಡಿನ ಅರೇಭಾಷೆ ಸಮುದಾಯದ ಅನೇಕ ಉತ್ಸಾಹಿಗಳು ಹಾಗೂ ಗುರಿಕಾರರು ಭಾಗವಹಿಸಿ ತಮ್ಮ ಶೂಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರೂ ಸಹ ಕೋವಿ ಹಿಡಿದು ತೆಂಗಿನಕಾಯಿಗೆ ನಿಖರವಾಗಿ ಗುರಿ ಇಟ್ಟು ಹೊಡೆಯುವ ಮೂಲಕ ನೆರೆದಿದ್ದ ಸಾರ್ವಜನಿಕರ ಮೆಚ್ಚುಗೆ ಹಾಗೂ ಚಪ್ಪಾಳೆ ಗಿಟ್ಟಿಸಿಕೊಂಡರು. ಈ ಸಂದರ್ಭ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು. ಅವಂದೂರು ಶ್ರೀ ಗೋಪಾಲಕೃಷ್ಣ ಯುವ ಸಂಘದ ಅಧ್ಯಕ್ಷರಾದ ದೇವಾಯಿರ ಕೀರ್ತನ್ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಖಜಾಂಚಿ ಚಂದ್ರಪ್ರಕಾಶ್ ಹಾಗೂ ಪದಾಧಿಕಾರಿಗಳು, ಸದಸ್ಯರು, ಸೂರಜ್ ಹೊಸೂರು, ಕೊಲ್ಯದ ಗಿರೀಶ್, ಪಟ್ಟಣ ದೀಪಕ್, ಸುರೇಶ್ ಸೇರಿದಂತೆ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ✍️ವರದಿ ದುಗ್ಗಳ ಸದಾನಂದ.


ಕಾಮೆಂಟ್‌ಗಳು (0)