ನಾಪೋಕ್ಲು: ಸ್ಥಳೀಯ 'ನಾಪೋಕ್ಲು ಕ್ಲೀನ್ ಅಪ್' ತಂಡದ ವತಿಯಿಂದ ಪಟ್ಟಣದಲ್ಲಿ 3ನೇ ಹಂತದ ಸ್ವಚ್ಛತಾ ಅಭಿಯಾನವನ್ನು ಭಾನುವಾರ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ನಾಪೋಕ್ಲು ಪೊಲೀಸ್ ಠಾಣೆಯಿಂದ ಆರಂಭಗೊಂಡು ನಾಪೋಕ್ಲು ಗ್ರಾಮ ಪಂಚಾಯಿತಿಯವರೆಗಿನ ಮುಖ್ಯ ರಸ್ತೆಯ ಇರು ಬದಿಗಳಲ್ಲಿ ಈ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಈ ಶ್ರಮದಾನ ಅಭಿಯಾನಕ್ಕೆ ನಾಪೋಕ್ಲು ಆಟೋ ಚಾಲಕರ ಮತ್ತು ಮಾಲೀಕರ ಸಂಘವು ಪೂರ್ಣ ಸಹಕಾರ ಹಾಗೂ ಬೆಂಬಲ ನೀಡಿತು. ಅಭಿಯಾನದ ಅಂಗವಾಗಿ ರಸ್ತೆ ಬದಿಗಳಲ್ಲಿ ಬಿದ್ದಿದ್ದ ಅಪಾರ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ, ಖಾಲಿ ಬಾಟಲಿಗಳು ಹಾಗೂ ಇತರ ಜೈವಿಕ ವಿಘಟನೆಯಾಗದ ತ್ಯಾಜ್ಯಗಳನ್ನು ಕಾರ್ಯಕರ್ತರು ಒಟ್ಟುಗೂಡಿಸಿ ಸಂಗ್ರಹಿಸಿ, ರಸ್ತೆಯನ್ನು ಸ್ವಚ್ಛಗೊಳಿಸಿ ಸಂಗ್ರಹಿಸಿದ ತ್ಯಾಜ್ಯವನ್ನು ಸಮರ್ಪಕವಾಗಿ ಇಲೆವರಿ ಮಾಡಲಾಯಿತು. ಅಂಗಡಿ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಮನವಿ: ಈ ಸಂದರ್ಭದಲ್ಲಿ ಮಾತನಾಡಿದ ನಾಪೋಕ್ಲು ಕ್ಲೀನ್ ಅಪ್ ತಂಡದ ಪ್ರತಿನಿಧಿಗಳು, "ನಾಪೋಕ್ಲು ಪಟ್ಟಣದ ಪ್ರತಿಯೊಬ್ಬ ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಮುಂಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ತ್ಯಾಜ್ಯ ಮತ್ತು ಪ್ಲಾಸ್ಟಿಕ್ಗಳನ್ನು ಎಲ್ಲೆಂದರಲ್ಲಿ ಅಥವಾ ರಸ್ತೆ ಬದಿಯಲ್ಲಿ ಎಸೆಯದೆ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು" ಎಂದು ಕೋರಿದರು. "ಸ್ವಚ್ಛ ನಾಪೋಕ್ಲು ನಿರ್ಮಾಣ ಮಾಡುವುದು ನಮ್ಮೆಲ್ಲರ ಜಂಟಿ ಜವಾಬ್ದಾರಿಯಾಗಿದೆ. ಪಟ್ಟಣದ ಅಂದ ಹಾಗೂ ನೈರ್ಮಲ್ಯವನ್ನು ಕಾಪಾಡಲು ಸಾರ್ವಜನಿಕರು, ವರ್ತಕರು ಮತ್ತು ವಾಹನ ಚಾಲಕರು ನಿರಂತರವಾಗಿ ಸಹಕರಿಸಬೇಕು" ಎಂದು ತಂಡದ ಸದಸ್ಯರು ವಿನಂತಿಸಿದರು. ✍️ ವರದಿ ದುಗ್ಗಳ ಸದಾನಂದ.


ಕಾಮೆಂಟ್ಗಳು (0)