ನವದೆಹಲಿ /ಮಡಿಕೇರಿ ಜು30: ಬ್ಯಾಂಕ್ ಸಾಲ ಮುಕ್ತಿಗಾಗಿ ಸುಸ್ತಿದಾರ ಕಾಫಿ ಬೆಳೆಗಾರರಿಗೆ ಕೆನರಾ ಬ್ಯಾಂಕ್ ಮತ್ತೊಂದು ಅವಕಾಶ ಕಲ್ಪಿಸಿದೆ. ಕಾಫಿ ಬೆಳೆಯುವ ಜಿಲ್ಲೆಗಳ ಆಯ್ದ ಶಾಖೆಗಳಲ್ಲಿ ಬ್ಯಾಂಕ್ “ಕ್ಯಾನ್ ಅದಾಲತ್” ನಡೆಸಲಿದ್ದು, ಸುಸ್ತಿದಾರ ಬೆಳೆಗಾರರು ಈ ಅವಕಾಶ ಸದುಪಯೋಗಪಡಿಸಿಕೊಂಡು ಸಾಲದಿಂದ ಮುಕ್ತರಾಗಬೇಕೆಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಮನವಿ ಮಾಡಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ ಕೆಲವು ವರ್ಷಗಳಿಂದ ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಂದಾಗಿ ಹಲವು ಕಾಫಿ ಬೆಳೆಗಾರರು ಬ್ಯಾಂಕ್ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದು, ಕೆಲವು ಖಾತೆದಾರರ ಆಸ್ತಿ ಹರಾಜು ಹಂತ ತಲುಪಿರುವ ವಿಚಾರ ತಮ್ಮ ಗಮನಕ್ಕೆ ಬಂದಿತ್ತು ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಮಂಡಳಿ ನಿರಂತರ ಚರ್ಚೆ ನಡೆಸಿದ ಫಲವಾಗಿ, ಈ ಹಿಂದೆಯೇ OTS (ಒನ್ ಟೈಮ್ ಸೆಟಲ್‌ಮೆಂಟ್) ಮೂಲಕ ರಿಯಾಯಿತಿ ದರದಲ್ಲಿ ಸಾಲ ಪಾವತಿಸುವ ಅವಕಾಶ ಕಲ್ಪಿಸಲಾಗಿತ್ತು. ಆದರೂ ಕೆಲವು ಬೆಳೆಗಾರರು ವೈಯಕ್ತಿಕ ಕಾರಣಗಳಿಂದಾಗಿ ಆ ಅವಕಾಶದಿಂದ ವಂಚಿತರಾಗಿದ್ದರು,
ಹಾಗಾಗಿ ಎಂ.ಜೆ. ದಿನೇಶ್ ಅವರು ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಹಾರ್ದಿಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ಖುದ್ದಾಗಿ ಭೇಟಿ ಮಾಡಿ, ಕಾಫಿ ಬೆಳೆಗಾರರ ಸಮಸ್ಯೆಗಳನ್ನು ವಿವರಿಸಿ ಮತ್ತೊಮ್ಮೆ ಒನ್ ಟೈಮ್ ಸೆಟಲ್‌ಮೆಂಟ್‌ಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದರು.
ಈ ಮನವಿಗೆ ಸ್ಪಂದಿಸಿದ ಕಾರ್ಯನಿರ್ವಾಹಕ ನಿರ್ದೇಶಕರು, ಆಯ್ದ ಪ್ರದೇಶಗಳ ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಕ್ಯಾನ್ ಅದಾಲತ್‌ಗೆ ಅವಕಾಶ ನೀಡಲು ಒಪ್ಪಿಗೆ ಸೂಚಿಸಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸುಸ್ತಿದಾರ ಕಾಫಿ ಬೆಳೆಗಾರರು ಬ್ಯಾಂಕ್ ಸಾಲದಿಂದ ಮುಕ್ತರಾಗಬೇಕೆಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರು ಮನವಿ ಮಾಡಿದ್ದಾರೆ.




