Google search engine
Home♦️ಇತ್ತೀಚಿನ ಸುದ್ದಿಗಳು.​ಖಾಸಗಿ ಲೇಔಟ್‌ನಿಂದ ಸಾರ್ವಜನಿಕ ರಸ್ತೆ ಅತಿಕ್ರಮಣ: ಶಾಸಕರಿಗೆ ಕ.ರ.ವೇ ಮನವಿ

​ಖಾಸಗಿ ಲೇಔಟ್‌ನಿಂದ ಸಾರ್ವಜನಿಕ ರಸ್ತೆ ಅತಿಕ್ರಮಣ: ಶಾಸಕರಿಗೆ ಕ.ರ.ವೇ ಮನವಿ

ಕುಶಾಲನಗರ ಜು.09: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ಳೂರು ಗ್ರಾಮದ ಸರ್ವೆ ನಂ. 18/5 ರಲ್ಲಿ ತಲತಲಾಂತರಗಳಿಂದ ಸಾರ್ವಜನಿಕರು ಹಾಗೂ ರೈತರು ಬಳಸುತ್ತಿದ್ದ ಏಕೈಕ ಗಾಡಿ ರಸ್ತೆಯನ್ನು ಖಾಸಗಿ ಬಡಾವಣೆ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದರ ಕುರಿತಾಗಿ, ಇದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕುಶಾಲನಗರ ತಾಲ್ಲೂಕು ಘಟಕ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 

ಈ ಸಂಬಂಧ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಡಾ. ಮಂತರ್ ಗೌಡ ಅವರಿಗೆ ಕ.ರ.ವೇ ವತಿಯಿಂದ ಅಧಿಕೃತ ಮನವಿ ಪತ್ರ ಸಲ್ಲಿಸಿ ತಕ್ಷಣದ ಕ್ರಮಕ್ಕೆ ಒತ್ತಾಯಿಸಲಾಗಿದೆ.

​ಬೊಳ್ಳೂರು ಗ್ರಾಮದ ಈ ರಸ್ತೆಯು ಸ್ಥಳೀಯ ರೈತರು ತಮ್ಮ ಕೃಷಿ ಫಸಲನ್ನು ಸಾಗಿಸಲು, ಗ್ರಾಮಸ್ಥರ ದಿನನಿತ್ಯದ ಓಡಾಟಕ್ಕೆ ಹಾಗೂ ಅಲ್ಲಿನ  ಚೌಡೇಶ್ವರಿ ದೇವಾಲಯಕ್ಕೆ ಭಕ್ತಾದಿಗಳು ತೆರಳಲು ಇರುವ ಏಕೈಕ ದಾರಿಯಾಗಿದೆ. ಆದರೆ ಪ್ರಸ್ತುತ ಈ ಜಾಗದಲ್ಲಿ “ಚಂದನವನ ಗ್ರೀನ್ ಎನ್‌ಕ್ಲೇವ್” ಎಂಬ ಬಡಾವಣೆ ನಿರ್ಮಿಸುತ್ತಿದ್ದು  ಸಾರ್ವಜನಿಕ ರಸ್ತೆಯನ್ನೇ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ತಡೆಗೋಡೆ ನಿರ್ಮಿಸುತ್ತಿದ್ದಾರೆ ಎಂದು ಕ.ರ.ವೇ ಮನವಿಯಲ್ಲಿ ದೂರಿದ್ದಾರೆ.

​ಈ ಕುರಿತು ಗ್ರಾಮಸ್ಥರು ನೀಡಿದ ದೂರಿನನ್ವಯ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಕುಶಾಲನಗರ ಕ.ರ.ವೇ ತಾಲ್ಲೂಕು ಅಧ್ಯಕ್ಷರಾದ ಅಣ್ಣಯ್ಯ ಈ ಬಗ್ಗೆ ಈಗಾಗಲೇ ಪಂಚಾಯಿತಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

​ಜನಾನುರಾಗಿ ಶಾಸಕರಾದ ಡಾ. ಮಂತರ್ ಗೌಡ ಅವರು ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ರೈತರ ಬದುಕಿಗೆ ಆಸರೆಯಾಗಬೇಕು ಎಂದು ಕ.ರ.ವೇ ರಾಜ್ಯಾಧ್ಯಕ್ಷರಾದ .ಎ. ನಾರಾಯಣಗೌಡರ ಮಾರ್ಗದರ್ಶನದಲ್ಲಿ ವಿನಂತಿಸಲಾಗಿದೆ. 

ಒಂದು ವೇಳೆ ಅಧಿಕಾರಿಗಳು ಈ ಸಮಸ್ಯೆಯನ್ನು ನಿರ್ಲಕ್ಷಿಸಿದರೆ, ನೊಂದ ರೈತರು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ಕ.ರ.ವೇ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭ ಕರವೇ ಕೊಡಗು ಜಿಲ್ಲಾ ಸಂಚಾಲಕರಾದ ಗೋವಿಂದರಾಜ್ ದಾಸ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಕುದುಪಜೆ, ತಾಲೂಕು ಅಧ್ಯಕ್ಷೆ ರೂಪಹಾನಗಲ್‌,ಹೋಬಳಿ ಅಧ್ಯಕ್ಷ ರಾಜೇಶ್, ಖಜಾಂಚಿ ರೊನಾಲ್ಡ್,ರಾಕೇಶ್, ಗ್ರಾಮಸ್ಥರುಗಳಾದ ಪ್ರಭಾಕರ್,ಚಂದ್ರನ್, ಕಣ್ಣನ್, ಧನಂಜಯ, ದಿವಾಕರ, ಸಲಿ,ಗುರುಪ್ರಸಾದ್,ಮಧು, ದೇವಣ್ಣರೈ,ಪ್ರಕಾಶ್,ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!