ಕುಶಾಲನಗರ, ಜು.08: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ (ಯುಜಿಡಿ) ಸಂಪರ್ಕಕ್ಕೆ ನಿಗದಿಪಡಿಸಲಾಗಿರುವ ಶುಲ್ಕಗಳು ಅವೈಜ್ಞಾನಿಕವಾಗಿದ್ದು, ಇದನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ಸಾರ್ವಜನಿಕರು ಹಾಗೂ ವರ್ತಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಕನ್ನಿಕಾ ಕನ್ವೇಷನ್ ಸೆಂಟರ್‌ನಲ್ಲಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನೇತೃತ್ವದಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಪುರಸಭೆಯ ದರ ನೀತಿಯ ವಿರುದ್ಧ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಸರ್ಕಾರದಿಂದ ಯುಜಿಡಿ ಕಾಮಗಾರಿಗಾಗಿ ಈಗಾಗಲೇ ಕೋಟ್ಯಾಂತರ ರೂಪಾಯಿ ಅನುದಾನ ಬಂದಿದ್ದು, ಈಗಾಗಲೇ ಹಲವು ರೀತಿಯ ತೆರಿಗೆಗಳನ್ನು ಕಟ್ಟಿ ಸುಸ್ತಾಗಿರುವ ಜನರ ಮೇಲೆ ಮತ್ತೆ ಹೊಸ ತೆರಿಗೆಯನ್ನು ಹೇರುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸಾರ್ವಜನಿಕರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೆ, ಪ್ರಸ್ತುತ ನಡೆದಿರುವ ಯುಜಿಡಿ ಕಾಮಗಾರಿಯು ಅತ್ಯಂತ ಕಳಪೆಯಾಗಿದ್ದು, ಹಲವು ಬಡಾವಣೆಗಳಲ್ಲಿ ಮ್ಯಾನ್‌ಹೋಲ್‌ಗಳು ಈಗಾಗಲೇ ಹಾಳಾಗಿವೆ ಮತ್ತು ಅಳವಡಿಸಲಾಗಿರುವ ಪೈಪ್‌ಗಳು ಚಿಕ್ಕದಾಗಿದ್ದು ಕೊಳಚೆ ನೀರು ಸರಾಗವಾಗಿ ಹರಿಯಲು ಸಾಧ್ಯವಿಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪುರಸಭೆಯು ಇತ್ತೀಚೆಗೆ ಹೊರಡಿಸಿರುವ ಪ್ರಕಟಣೆಯ ಪ್ರಕಾರ, 10 ಕೊಠಡಿಗಳಿಗಿಂತ ಹೆಚ್ಚಿರುವ ದೊಡ್ಡ ಹೋಟೆಲ್ ಹಾಗೂ ಕಲ್ಯಾಣ ಮಂಟಪಗಳಿಗೆ (ಗ್ರೇಡ್-1) ₹10,000 ಸಂಪರ್ಕ ಶುಲ್ಕ ಮತ್ತು ₹10,000 ವಾರ್ಷಿಕ ನಿರ್ವಹಣಾ ಶುಲ್ಕ, ಮಧ್ಯಮ ಹೋಟೆಲ್‌ಗಳಿಗೆ (ಗ್ರೇಡ್-2) ₹5,000 ಹಾಗೂ ಸಣ್ಣ ಉದ್ದಿಮೆಗಳಿಗೆ (ಗ್ರೇಡ್-3) ₹3,000 ಶುಲ್ಕ ನಿಗದಿಪಡಿಸಲಾಗಿದೆ. ಇನ್ನು ವಾಸದ ಮನೆಗಳಿಗೆ ವಿಸ್ತೀರ್ಣದ ಆಧಾರದ ಮೇಲೆ ₹2,000 ದಿಂದ ₹3,000 ರವರೆಗೆ ಸಂಪರ್ಕ ಮತ್ತು ವಾರ್ಷಿಕ ನಿರ್ವಹಣಾ ಶುಲ್ಕ ಇರಲಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ (SC/ST) ಸ್ವಂತ ಮನೆಗಳಿಗೆ ಒಂದು ಬಾರಿಯ ಸಂಪರ್ಕ ಶುಲ್ಕವನ್ನು ಪುರಸಭೆ ನಿಧಿಯಿಂದ ಭರಿಸಿದರೂ, ವಾರ್ಷಿಕ ₹1,000 ನಿರ್ವಹಣಾ ಶುಲ್ಕವನ್ನು ಕಡ್ಡಾಯಗೊಳಿಸಲಾಗಿದೆ.
ಈ ದರ ಪಟ್ಟಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸಾರ್ವಜನಿಕರು, ಕೇವಲ ಯುಜಿಡಿ ಸಂಪರ್ಕಕ್ಕಾಗಿ ಮನೆ ಹಾಗೂ ವಾಣಿಜ್ಯ ಕಟ್ಟಡಗಳ ಆಧಾರದ ಮೇಲೆ ₹500 ರಿಂದ ₹2,000 ರವರೆಗೆ ಒಮ್ಮೆಯ ಶುಲ್ಕ ನೀಡಲು ಸಿದ್ಧವಿದ್ದರೂ, ಪ್ರತಿ ವರ್ಷ ನಿರ್ವಹಣಾ ವೆಚ್ಚವನ್ನು ಕಟ್ಟಲು ಸಾಧ್ಯವೇ ಇಲ್ಲ ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೇಂಬರ್ ಆಫ್ ಕಾಮರ್ಸ್‌ನ ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಹಾಗೂ ಸ್ಥಳೀಯ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ಜನರ ಆಶಯದಂತೆ ಕೇವಲ ಸಂಪರ್ಕ ಶುಲ್ಕ ಮಾತ್ರ ಪಡೆಯುವಂತೆ ಜಿಲ್ಲಾ ಅಸಿಸ್ಟೆಂಟ್ ಕಮಿಷನರ್ ಹಾಗೂ ಪುರಸಭೆ ಆಡಳಿತಾಧಿಕಾರಿಗಳಾದ ನಿತಿನ್ ಚೆಕ್ಕಿ ಅವರಿಗೆ ಲಿಖಿತ ಮನವಿ ಸಲ್ಲಿಸಿ ಮನವರಿಕೆ ಮಾಡಿಕೊಡಲಾಗುವುದು,

ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹಾಗೂ ಜಿಲ್ಲಾಧಿಕಾರಿಗಳ ಬಳಿಗೆ ನಿಯೋಗ ತೆರಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಚಿತ್ರ ರಮೇಶ್, ಖಜಾಂಚಿ ಎನ್.ವಿ. ಬಾಬು, ಪ್ರಮುಖರಾದ ಬಶೀರ್, ನಾಸಿರ್, ಅರ್ಜುನ್ ಗುಪ್ತ, ಪ್ರಶಾಂತ್, ರಮೇಶ್ ಸೇರಿದಂತೆ ನೂರಾರು ನಾಗರಿಕರು ಉಪಸ್ಥಿತರಿದ್ದರು.




