Google search engine
Home♦️ಇತ್ತೀಚಿನ ಸುದ್ದಿಗಳು.ಕರವೇ ಸ್ವಾಭಿಮಾನಿ ಬಣಕ್ಕೆ ನೂತನ ಸದಸ್ಯರ ಸೇರ್ಪಡೆ: ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ರಾಜ್ಯಾಧ್ಯಕ್ಷ   ಪಿ. ಕೃಷ್ಣೇಗೌಡ...

ಕರವೇ ಸ್ವಾಭಿಮಾನಿ ಬಣಕ್ಕೆ ನೂತನ ಸದಸ್ಯರ ಸೇರ್ಪಡೆ: ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ರಾಜ್ಯಾಧ್ಯಕ್ಷ   ಪಿ. ಕೃಷ್ಣೇಗೌಡ ಕರೆ

ನೆಲ್ಯಹುದಿಕೇರಿ ಜೂ.26: ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ವತಿಯಿಂದ ವಿರಾಜಪೇಟೆ ಹಾಗೂ ಕುಶಾಲನಗರ ತಾಲೂಕಿನ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಮತ್ತು ದುಂಡು ಮೇಜಿನ ಸಭೆಯು ನಿನ್ನೆ ದಿನ ಜೂನ್ 25ರ ಗುರುವಾರ   ನೆಲ್ಯಹುದಿಕೇರಿಯ ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಪಿ. ಕೃಷ್ಣೇಗೌಡರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಿತು.

 ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸಿನಂತೆ ಗ್ರಾಮ ಮಟ್ಟದಲ್ಲಿ ಮೂಲಭೂತ ಸುಧಾರಣೆಗಳಾಗಬೇಕಿದೆ. ಸ್ಥಳೀಯವಾಗಿ ಎದುರಾಗುವ ರಸ್ತೆ, ಆಸ್ಪತ್ರೆ, ಶಾಲಾ ಶಿಕ್ಷಣ, ಕುಡಿಯುವ ನೀರು ಸೇರಿದಂತೆ ಹಲವಾರು ಸಮಸ್ಯೆಗಳಿಂದ ನೊಂದ ಸಾರ್ವಜನಿಕರಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ನಮ್ಮ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

​ಸಂಘಟನೆಯ ಒಗ್ಗಟ್ಟಿನ ಮಹತ್ವವನ್ನು ಮಾರ್ಮಿಕವಾಗಿ ವಿವರಿಸಿದ ಅವರು, ಒಂದು ಜೇನುನೊಣವನ್ನು ನಾವು ಸುಲಭವಾಗಿ ಸಾಯಿಸಬಹುದು, ಆದರೆ ಇಡೀ ಜೇನುಗೂಡಿಗೆ ಕೈ ಹಾಕಲು ಯಾರೂ ಧೈರ್ಯ ಮಾಡುವುದಿಲ್ಲ. ಏಕೆಂದರೆ ಅದರ ಒಗ್ಗಟ್ಟಿನ ಶಕ್ತಿ ಮತ್ತು ತಿರುಗಿಬೀಳುವ ಗುಣ ಎದುರಾಳಿಗಳಲ್ಲಿ ನಡುಕ ಹುಟ್ಟಿಸುತ್ತದೆ. ಸಂಘಟನೆಗಳು ಕೂಡ ಹಾಗೆಯೇ ಒಗ್ಗಟ್ಟಿನಿಂದ ಇದ್ದಾಗ ಮಾತ್ರ  ವ್ಯವಸ್ಥೆ ನಮ್ಮನ್ನು ಕಡೆಗಣಿಸಲು ಹೆದರುತ್ತದೆ. ಎಂದರು. 

ಇದೇ ಸಂದರ್ಭದಲ್ಲಿ, ಇತ್ತೀಚೆಗೆ ಕುಶಾಲನಗರ ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ಧ ಜಿಲ್ಲಾ ಆರೋಗ್ಯ ಅಧಿಕಾರಿಗೆ ಸಾರ್ವಜನಿಕರ ಪರವಾಗಿ ಮನವರಿಕೆ ಮಾಡಿಕೊಟ್ಟು ಹೋರಾಟ ನಡೆಸಿರುವುದು ಹಾಗೂ ಇಂದಿರಾ ಕ್ಯಾಂಟೀನ್‌ಗಳ ಅವ್ಯವಸ್ಥೆಯನ್ನು ಸರಿಪಡಿಸಲು ಶ್ರಮಿಸಿರುವುದು ಸೇರಿದಂತೆ ಜಿಲ್ಲೆಯಾದ್ಯಂತ ನೊಂದವರ ಕಷ್ಟಕ್ಕೆ ಸದಾ ಧ್ವನಿಯಾಗುತ್ತಿರುವ ಸಂಘಟನೆಯ ಕಾರ್ಯಕರ್ತರ ಜನಪರ ಕಾರ್ಯಗಳನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

​ರಾಜಕೀಯ ಪಕ್ಷಗಳಿಗೂ ಮತ್ತು ನಮ್ಮ ಸಂಘಟನೆಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಸ್ಪಷ್ಟಪಡಿಸಿದ ಪಿ. ಕೃಷ್ಣೇಗೌಡರು, ಇತ್ತೀಚಿನ ದಿನಗಳಲ್ಲಿ ಅನೈತಿಕ ಹಾಗೂ ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಿಸಿಕೊಂಡವರು ಕೂಡ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುತ್ತಿರುವುದು ಆತಂಕದ ವಿಷಯವಾಗಿದೆ. ಆದರೆ ನಮ್ಮ ಸಂಘಟನೆಯು ಕನ್ನಡ ನೆಲ, ಜಲ, ಭಾಷೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಶೋಷಿತರ, ದುರ್ಬಲರ ಮತ್ತು ದಮನಿತರ ಪರವಾಗಿ ಸದಾ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.

​ಇದೇ ಸಂದರ್ಭದಲ್ಲಿ ವಿವಿಧ ರಂಗಗಳ ಪ್ರಮುಖರು ಸಂಘಟನೆಯನ್ನು ಅಧಿಕೃತವಾಗಿ ಸೇರಿಕೊಂಡರು. ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷರಾದ ಸೂದನ ಸತೀಶ್, ಸಿದ್ದಾಪುರದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೀನಾ ತುಳಸಿ, ಮಾಜಿ ಸದಸ್ಯರಾದ ಯಮುನಾ, ಪ್ರಮುಖರಾದ ಸುಬ್ರಮಣಿ (ಸೂರಿ), ರಿಜಿತ್, ದಾಸ (ನೆಲ್ಯಹುದಿಕೇರಿ), ರಸಾಕ್, ಮುತ್ತಾಲಿ, ರಘು (ಹೊಸ್ಕೇರಿ), ಬಾಬು ಬಿ.ಜೆ., ರದಿಶ್ ಹಾಗೂ ಚಾಲಕರಾದ ರವಿ, ಮುತ್ತಪ್ಪ ಮತ್ತು ಆಟೋ ಚಾಲಕರಾದ ಶಶಿ ಸೇರಿದಂತೆ ಹಲವರು ಕರವೇ ಸ್ವಾಭಿಮಾನಿ ಬಣದ ಧ್ವಜ ಹಿಡಿಯುವ ಮೂಲಕ ಸೇರ್ಪಡೆಯಾದರು. 

ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ದ ಕೊಡಗು ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿ’ಸೋಜಾ, ಜಿಲ್ಲಾ ಉಸ್ತುವಾರಿ ತನು ಕಿಶೋರ್, ಜಿಲ್ಲಾ ಸಲಹೆಗಾರ ಸಜಿಲ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ವಿ.ಎಸ್. ರಾಜಶೇಖರ್‌ಗೌಡ ಹಾಗೂ ಜಿಲ್ಲಾ ಗೌರವಾಧ್ಯಕ್ಷರಾದ ಕೆ. ಚಂದ್ರು ಅವರು ಉಪಸ್ಥಿತರಿದ್ದರು. ಇವರೊಂದಿಗೆ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಬೆಲ್ಲು ಕಾರ್ಯಪ್ಪ, ಜಿಲ್ಲಾ ಕಾರ್ಯದರ್ಶಿ ಸುರೇಶ್ ನೆಲ್ಲಿಕಲ್ ಮತ್ತು ಕುಶಾಲನಗರ ತಾಲ್ಲೂಕು ಅಧ್ಯಕ್ಷರಾದ ಕೆ.ಎಸ್. ಶಿವ ಅವರು ಭಾಗವಹಿಸಿದ್ದರು. ಅಲ್ಲದೆ, ನೆಲ್ಯಹುದಿಕೇರಿ ಘಟಕದ ಅಧ್ಯಕ್ಷ ಹರೀಶ್ ಪಿ. ಆರ್, ಉಪಾಧ್ಯಕ್ಷ ರಸಾದ್ ಎಂ.ಎ, ಕಾರ್ಯದರ್ಶಿ ನಂದ ಅರ್ ಸೇರಿದಂತೆ ಸಂಘಟನೆಯ ಪ್ರಮುಖ ಪದಾಧಿಕಾರಿಗಳು ಹಾಗೂ ಹಲವಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

ವರದಿ: ನವೀನ್ ಚಿಣ್ಣಪ್ಪ, ಚಿಕ್ಕಬೆಟ್ಟಗೇರಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!