ಬೆಂಗಳೂರು, ಅ.6: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು 'ವಿಕಸಿತ ಭಾರತ – ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಯೋಜನೆ ಕಾಯ್ದೆ-2025' (ವಿಬಿ-ಜಿ ರಾಮ್ ಜಿ) ಅಡಿ ಕೈಗೊಳ್ಳಬಹುದಾದ ಕಾಮಗಾರಿಗಳ ವೇಳಾಪಟ್ಟಿಯನ್ನು ಅಧಿಸೂಚಿಸಿದ್ದು, ಒಟ್ಟು 375 ಕಾಮಗಾರಿಗಳಿಗೆ ಅವಕಾಶ ಕಲ್ಪಿಸಿದೆ. ಹಿಂದಿನ ಚೌಕಟ್ಟಿನಲ್ಲಿ 266 ಕಾಮಗಾರಿಗಳಿದ್ದು, ಹೊಸ ಪಟ್ಟಿಯಲ್ಲಿ ಶೇ.41ರಷ್ಟು ವಿಸ್ತರಣೆಯಾಗಿದೆ ಎಂದು ಸಚಿವಾಲಯದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಈ ಕಾಮಗಾರಿಗಳನ್ನು ಜಲ ಭದ್ರತೆ, ಪ್ರಮುಖ ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಸಂಬಂಧಿತ ಮೂಲಸೌಕರ್ಯ ಹಾಗೂ ಹವಾಮಾನ ವೈಪರೀತ್ಯ ಮತ್ತು ವಿಪತ್ತು ಸನ್ನದ್ಧತೆಗಳ ಮರು ಸಂಘಟನಾ ಚಟುವಟಿಕೆಗಳಿಗೆ ಬಳಸಲಾಗುವುದು ಎಂದು ತಿಳಿಸಲಾಗಿದೆ ಇವುಗಳಲ್ಲಿ ಜಲ ಭದ್ರತೆಗೆ ಅತಿ ಹೆಚ್ಚು, ಅಂದರೆ 128 ಕಾಮಗಾರಿಗಳನ್ನು ಮೀಸಲಿಡಲಾಗಿದೆ. ಚೆಕ್ ಡ್ಯಾಮ್, ಗಲ್ಲಿ ಪ್ಲಗ್, ಅಂತರ್ಜಲ ಡೈಕ್, ರಿಚಾರ್ಜ್ ಶಾಫ್ಟ್, ಇಂಜೆಕ್ಷನ್ ಬಾವಿ, ನದಿ-ತೊರೆ-ನಾಲಾ ಪುನರುಜ್ಜೀವನ ಹಾಗೂ ಕಾಲುವೆ ನವೀಕರಣ ಇದರಲ್ಲಿ ಸೇರಿವೆ. ಹನಿ ನೀರಾವರಿ, ಸ್ಪ್ರಿಂಕ್ಲರ್, ಛಾವಣಿ ಮಳೆನೀರು ಕೊಯ್ಲು, ಐಸ್-ಸ್ತೂಪ ಮತ್ತು ಕೃತಕ ಹಿಮನದಿಗಳಂತಹ ಹೊಸ ಉಪಕ್ರಮಗಳಿಗೂ ಅವಕಾಶವಿದೆ. ಪ್ರಮುಖ ಗ್ರಾಮೀಣ ಮೂಲಸೌಕರ್ಯ ಸ್ತಂಭದಡಿ 111 ಕಾಮಗಾರಿಗಳಿದ್ದು, ಸೌರ ಬೀದಿ ದೀಪ, ತ್ಯಾಜ್ಯದಿಂದ ಸಂಪತ್ತು ಘಟಕ, ಬೂದು ನೀರು ಸಂಸ್ಕರಣೆ, ಗ್ರಾಮೀಣ ಗ್ರಂಥಾಲಯ, ಪಶುವೈದ್ಯಕೀಯ ಮತ್ತು ಆರೋಗ್ಯ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ, ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿ ಮತ್ತು ಪ್ರಯೋಗಾಲಯ ಹಾಗೂ ಜಲ ಜೀವನ್ ಮಿಷನ್ ಮೂಲಸೌಕರ್ಯ ದುರಸ್ತಿ ಸೇರಿವೆ. ಜೀವನೋಪಾಯ ಸಂಬಂಧಿತ ಮೂಲಸೌಕರ್ಯಕ್ಕೆ 98 ಕಾಮಗಾರಿಗಳನ್ನು ನಿಗದಿಪಡಿಸಲಾಗಿದ್ದು, ಕೃಷಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಗ್ರೇಡಿಂಗ್-ಪ್ಯಾಕೇಜಿಂಗ್ ಘಟಕ, ಶೈತ್ಯಾಗಾರ, ಮಿನಿ ಹಿಟ್ಟಿನ ಗಿರಣಿ, ಮಾರುಕಟ್ಟೆ ಪ್ರಾಂಗಣ, ಅಣಬೆ ಮತ್ತು ರೇಷ್ಮೆ ಕೃಷಿ ಶೆಡ್, ಪಾಲಿಹೌಸ್, ಸ್ವಸಹಾಯ ಸಂಘಗಳ ವರ್ಕ್‌ಶೆಡ್, 'ಶೀ ಮಾರ್ಟ್' ಹಾಗೂ ಕೌಶಲ್ಯ ತರಬೇತಿ ಕೇಂದ್ರಗಳು ಒಳಗೊಂಡಿವೆ. ಹೊಸ ಚೌಕಟ್ಟಿನಲ್ಲಿ ಈ ವರ್ಗದ ಪಾಲು ಶೇ.26ರಷ್ಟಿದ್ದು, ಹಿಂದೆ ಇದು ಕೇವಲ ಶೇ.1.1ರಷ್ಟಿತ್ತು. ಮೊದಲ ಬಾರಿಗೆ ವಿಪತ್ತು ಸನ್ನದ್ಧತೆ ಮತ್ತು ಹವಾಮಾನ ವೈಪರೀತ್ಯಕ್ಕಾಗಿ ಪ್ರತ್ಯೇಕ ವರ್ಗವನ್ನು ಸೇರಿಸಲಾಗಿದ್ದು, ಇದರಲ್ಲಿ 38 ಕಾಮಗಾರಿಗಳಿವೆ. ಪ್ರವಾಹ ಪರಿಹಾರ ಆಶ್ರಯ, ತಡೆಗೋಡೆ, ಒಡ್ಡು ಬಲಪಡಿಸುವಿಕೆ, ವಿಪತ್ತು ನಂತರದ ರಸ್ತೆ ಮತ್ತು ಸಮುದಾಯ ಸ್ವತ್ತುಗಳ ಪುನಃಸ್ಥಾಪನೆ ಹಾಗೂ ಫೈರ್‌ಲೈನ್ ಮತ್ತು ಇಂಧನ-ಬಫರ್ ವಲಯಗಳಂತಹ ಕಾಡ್ಗಿಚ್ಚು ನಿರ್ವಹಣಾ ಕ್ರಮಗಳು ಇದರಲ್ಲಿ ಸೇರಿವೆ. ಪಟ್ಟಿಯಲ್ಲಿ ರೈತರು, ದುರ್ಬಲ ಕುಟುಂಬಗಳು, ಮಹಿಳೆಯರು ಮತ್ತು ಗ್ರಾಮೀಣ ಯುವಕರಿಗೆ ವಿಶೇಷ ಒತ್ತು ನೀಡಲಾಗಿದೆ. ಒಟ್ಟು 181 ಕಾಮಗಾರಿಗಳು ಕೃಷಿ ಮತ್ತು ಸಂಬಂಧಿತ ಕ್ಷೇತ್ರಕ್ಕೆ ಸಂಬಂಧಿಸಿದ್ದು, ಇವುಗಳಲ್ಲಿ 52 ವೈಯಕ್ತಿಕ ಫಲಾನುಭವಿ ಕಾಮಗಾರಿಗಳಾಗಿವೆ. ಅಂತ್ಯೋದಯ ಮತ್ತು ದುರ್ಬಲ ಕುಟುಂಬಗಳಿಗೆ 107 ಕಾಮಗಾರಿಗಳನ್ನು ಟ್ಯಾಗ್ ಮಾಡಲಾಗಿದ್ದು, ಅವುಗಳಲ್ಲಿ 68 ವೈಯಕ್ತಿಕ ಫಲಾನುಭವಿ ಕಾಮಗಾರಿಗಳು. ನಾರಿ ಶಕ್ತಿಗೆ 36 ಹಾಗೂ ಯುವ ಶಕ್ತಿಗೆ 36 ಕಾಮಗಾರಿಗಳನ್ನು ಮೀಸಲಿಡಲಾಗಿದೆ. ಸರ್ಕಾರಿ ಕಟ್ಟಡಗಳಲ್ಲಿ ದಿವ್ಯಾಂಗರಿಗಾಗಿ ಮೆಟ್ಟಿಲು ಮತ್ತು ರಾಂಪ್ ನಿರ್ಮಾಣಕ್ಕೂ ಸ್ಪಷ್ಟ ನಿಬಂಧನೆ ಕಲ್ಪಿಸಲಾಗಿದೆ. ಪ್ರತಿ ಕಾಮಗಾರಿಯೂ ಗ್ರಾಮ ಸಭೆ ಅನುಮೋದಿಸಿದ 'ವಿಕಸಿತ ಗ್ರಾಮ ಪಂಚಾಯತ್' ಯೋಜನೆಯ ಮೂಲಕ ಕೆಳಗಿನಿಂದ ಮೇಲಕ್ಕೆ ಆರಂಭವಾಗುತ್ತದೆ. 'ವಿಕಸಿತ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟಾಕ್' ಮೂಲಕ ಡಿಜಿಟಲ್ ಟ್ರ್ಯಾಕಿಂಗ್ ನಡೆಯಲಿದ್ದು, ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಯೋಜನೆಗಳ ಹೂಡಿಕೆಗಳ ಒಮ್ಮುಖಕ್ಕೆ ನೆರವಾಗಲಿದೆ. ಇದರಿಂದ 'ವಿಕಸಿತ ಭಾರತ @2047' ಗುರಿಗೆ ಕೊಡುಗೆ ನೀಡಲಿದೆ ಎಂದು ಸಚಿವಾಲಯ ತಿಳಿಸಿದೆ.




ಕಾಮೆಂಟ್‌ಗಳು (0)