ಪೊನ್ನಂಪೇಟೆ: ಪೊಲೀಸ್ ಭದ್ರತೆಯೊಂದಿಗೆ ಬಂದ ಕೆನರಾ ಬ್ಯಾಂಕ್ ಅಧಿಕಾರಿಗಳು ಬೀಳೂರಿನ ರೈತರೊಬ್ಬರ ಮನೆಯ ವಸ್ತುಗಳನ್ನು ಹೊರಗಿಟ್ಟು, ಮನೆಗೆ ಬೀಗ ಜಡಿದ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸಂಸದರು ತಕ್ಷಣ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ, ಮುಟ್ಟುಗೋಲು ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ರೈತ ಪಡೆದಿದ್ದ ₹37.50 ಲಕ್ಷ ಅಸಲು ಸಾಲಕ್ಕೆ ಬಡ್ಡಿ ಸೇರಿಸಿ ₹1.43 ಕೋಟಿ ವಸೂಲಿಗೆ ಬ್ಯಾಂಕ್ ಮುಂದಾಗಿದೆ. ಎಕರೆಗೆ ಸುಮಾರು ₹50 ಲಕ್ಷ ಮೌಲ್ಯದ 11 ಎಕರೆ ಕಾಫಿ ತೋಟವನ್ನು ಕೇವಲ ₹12 ಲಕ್ಷದ ಕನಿಷ್ಠ ದರಕ್ಕೆ ಹರಾಜು ಹಾಕಲಾಗಿದೆ. ಇದು ಮೇಲ್ನೋಟಕ್ಕೇ ರೈತ ಕುಟುಂಬಕ್ಕೆ ಮಾಡಿದ ಅನ್ಯಾಯ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗದಿರುವಾಗಲೇ ಏಕಾಏಕಿ ಮನೆ ಖಾಲಿ ಮಾಡಿಸಿ ಕುಟುಂಬಕ್ಕೆ ಮುಜುಗರ ಉಂಟುಮಾಡಿರುವುದನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಸಂಸದರು ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಪೊನ್ನಂಪೇಟೆ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಹಾಗೂ ಬ್ಯಾಂಕಿನ ಉನ್ನತ ಅಧಿಕಾರಿಗಳೊಂದಿಗೆ (CFO) ಖುದ್ದು ಮಾತನಾಡಿದರು. "ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಾಗ ಇಂತಹ ಆತುರದ ಮತ್ತು ಕಠಿಣ ಕ್ರಮ ಸಮರ್ಥನೀಯವಲ್ಲ. ಏಕಪಕ್ಷೀಯ ಮುಟ್ಟುಗೋಲು ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿ, ನಿಯಮಾನುಸಾರ ಹಾಗೂ ಮಾನವೀಯ ನೆಲೆಯಲ್ಲಿ ರೈತನಿಗೆ ನ್ಯಾಯ ಒದಗಿಸಬೇಕು" ಎಂದು ಅವರು ತಾಕೀತು ಮಾಡಿದರು. ಅಲ್ಲದೆ, ಈ ಪ್ರಕರಣ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರಿಗೆ ಆಗುತ್ತಿರುವ ಇಂತಹ ಅನ್ಯಾಯವನ್ನು ಕೇಂದ್ರ ಹಣಕಾಸು ಸಚಿವರ ಗಮನಕ್ಕೆ ತಂದು, ಉನ್ನತ ಮಟ್ಟದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಂಸದರು ಭರವಸೆ ನೀಡಿದ್ದಾರೆ. "ಯಾವುದೇ ಸಂದರ್ಭದಲ್ಲೂ ನಮ್ಮ ರೈತರು ಮತ್ತು ಅವರ ಕುಟುಂಬ ಬೀದಿಗೆ ಬೀಳಲು ಬಿಡುವುದಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ನ್ಯಾಯ ಕೊಡಿಸಲು ನಾವೆಲ್ಲರೂ ಬದ್ಧರಾಗಿದ್ದೇವೆ" ಎಂದು ಅವರು ಹೇಳಿದ್ದಾರೆ.
ಸಾಲ ಬಾಕಿ: ರೈತನ ಮನೆಗೇ ಬೀಗ! ಸಂಸದರ ಮಧ್ಯಪ್ರವೇಶದಿಂದ ಬ್ಯಾಂಕ್ ಕ್ರಮಕ್ಕೆ ಬ್ರೇಕ್ ನಿರೀಕ್ಷೆ
by Kodagu Varadi•ಅಕ್ಟೋಬರ್ 9, 2026BREAKING

ಕಾಮೆಂಟ್‌ಗಳು (0)