Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ರಾಜ್ಯ

ಹೆಸರಿನ ಹಕ್ಕು: ಲಕ್ಷ್ಮಿ ಇನ್ನು ‘ವೀಣಾ’; ಜ್ಯೋತಿಷ್ಯ ನಂಬಿಕೆಯ ಮೇಲೆ ಬಾಲಕಿಯ ಹೆಸರು ಬದಲಿಸಲು ಹೈಕೋರ್ಟ್ ಒಪ್ಪಿಗೆ

by Kodagu Varadi•ಅಕ್ಟೋಬರ್ 9, 2026BREAKING
ಹೆಸರಿನ ಹಕ್ಕು: ಲಕ್ಷ್ಮಿ ಇನ್ನು ‘ವೀಣಾ’; ಜ್ಯೋತಿಷ್ಯ ನಂಬಿಕೆಯ ಮೇಲೆ ಬಾಲಕಿಯ ಹೆಸರು ಬದಲಿಸಲು ಹೈಕೋರ್ಟ್ ಒಪ್ಪಿಗೆ

ಬೆಂಗಳೂರು: ಹೆಸರು ಬದಲಿಸಲು ಹೊಸ ಹೆಸರಿನ ಬಳಕೆಯ ಹಳೆಯ ದಾಖಲೆಗಳನ್ನೇ ಕೇಳುವುದು ಸರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದ್ದು, ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ನಂಬಿಕೆಯ ಆಧಾರದಲ್ಲಿ ಅಪ್ರಾಪ್ತ ಬಾಲಕಿಯ ಹೆಸರನ್ನು ‘ಲಕ್ಷ್ಮಿ ಎನ್’ ಎಂಬುದರಿಂದ ‘ವೀಣಾ ಎನ್’ ಎಂದು ಬದಲಿಸಲು ಅನುಮತಿ ನೀಡಿದೆ. ನ್ಯಾಯಮೂರ್ತಿ ಹಂಚಾಟೆ ಸಂಜೀವ ಕುಮಾರ್ ಅವರ ಏಕಸದಸ್ಯ ಪೀಠವು, “ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹೆಸರಿನ ಮೂಲಕ ಗುರುತಿಸಿಕೊಳ್ಳುವುದು ನಾಗರಿಕ ಹಕ್ಕು” ಎಂದು ಹೇಳಿದೆ. ಶಾಲಾ ದಾಖಲೆಗಳು ಸೇರಿದಂತೆ ಎಲ್ಲ ಸಾರ್ವಜನಿಕ ದಾಖಲೆಗಳಲ್ಲಿ ಬಾಲಕಿಯನ್ನು ಇನ್ನು ಮುಂದೆ ‘ವೀಣಾ ಎನ್’ ಎಂದು ಗುರುತಿಸುವಂತೆ ಆದೇಶಿಸಿದೆ. 2010ರ ಅಕ್ಟೋಬರ್ 10ರಂದು ಜನಿಸಿದ ಬಾಲಕಿಗೆ ನಾಮಕರಣದ ವೇಳೆ ‘ಲಕ್ಷ್ಮಿ ಎನ್’ ಎಂದು ಹೆಸರಿಡಲಾಗಿತ್ತು. ಆದರೆ ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ಪ್ರಕಾರ ‘ವೀಣಾ ಎನ್’ ಹೆಸರು ಮಗಳಿಗೆ ಹೆಚ್ಚು ಶ್ರೇಯಸ್ಸು ತರಲಿದೆ ಎಂದು ಪೋಷಕರು ನಂಬಿದ್ದರು. ಹೀಗಾಗಿ ದಾಖಲೆಗಳಲ್ಲಿ ಹೆಸರು ಬದಲಿಸಲು ನಿರ್ದೇಶನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ‘ವೀಣಾ ಎನ್’ ಎಂಬ ಹೆಸರನ್ನು ದೃಢಪಡಿಸುವ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ಕಾರಣ ನೀಡಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನ 31ನೇ ಹೆಚ್ಚುವರಿ ಸತ್ರ ನ್ಯಾಯಾಲಯವು ದಾವೆಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಬಾಲಕಿಯ ತಂದೆ ನಿಂಗೇಗೌಡ ಅವರ ಮೂಲಕ ಲಕ್ಷ್ಮಿ ಎನ್ ಸಲ್ಲಿಸಿದ್ದ ಪ್ರಥಮ ಮೇಲ್ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್, ಕೆಳ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿತು. ಹೊಸ ಹೆಸರನ್ನು ಈಗಾಗಲೇ ಬಳಸಲಾಗುತ್ತಿದೆ ಎಂಬುದನ್ನು ಸಾಬೀತುಪಡಿಸುವ ದಾಖಲೆಗಳನ್ನು ಕಡ್ಡಾಯವಾಗಿ ಕೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು. “ಬಾಲಕಿಯ ಹೆಸರು ಆರಂಭದಿಂದಲೇ ತಪ್ಪಾಗಿ ದಾಖಲಾಗಿದೆ ಎಂಬುದು ಪೋಷಕರ ವಾದವಲ್ಲ. ಈಗಿರುವ ಹೆಸರನ್ನು ಹೊಸ ಹೆಸರಿಗೆ ಬದಲಿಸಬೇಕು ಎಂಬುದಷ್ಟೇ ಅವರ ಕೋರಿಕೆ. ಆದ್ದರಿಂದ ಹೊಸ ಹೆಸರಿನ ಹಿಂದಿನ ದಾಖಲೆಗಳನ್ನು ಕೇಳುವುದು ಸಮರ್ಥನೀಯವಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿತು

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!