
ಕುಶಾಲನಗರ : ಕೇರಳ ಸಮಾಜದ ವತಿಯಿಂದ ಓಣಂ ಆಚರಣೆ ಕಾರ್ಯಕ್ರಮವು ಇಂದು ಅ.4 ರ ಭಾನುವಾರ ಪಟ್ಟಣದ ಎ.ಪಿ.ಸಿ.ಎಂ.ಎಸ್. ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು. ಸಮಾಜದ ಪ್ರಗತಿಯಲ್ಲಿ ದಾನಿಗಳು ಹಾಗೂ ಸದಸ್ಯರ ಕೊಡುಗೆ ಬಹಳ ಮುಖ್ಯ ಪಾತ್ರವಾಗಿರುತ್ತದೆ ಎಂದು ಕುಶಾಲನಗರ ಕೇರಳ ಸಮಾಜದ ಅಧ್ಯಕ್ಷ ಪಿ. ರವೀಂದ್ರನ್ ಅವರು ಅಭಿಪ್ರಾಯಪಟ್ಟರು. ಕೇರಳ ಸಮಾಜದ ವತಿಯಿಂದ ಕುಶಾಲನಗರದಲ್ಲಿ ನಡೆದ 26 ನೇ ವಾರ್ಷಿಕ ಓಣಂ ಆಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ , ನಾವು ಮಲಯಾಳಿ ಭಾಷಿಗರಾಗಿದ್ದು ನಮ್ಮ ಸಮಾಜದಲ್ಲಿ ಹಿಂದೂ, ಮುಸಲ್ಮಾನ ಹಾಗೂ ಕ್ರಿಶ್ಚಿಯನ್ ಜನಾಂಗದ ಸಹೋದರರು ಕೇರಳ ಸಮಾಜದ ಭಾಗವಾಗಿ ಕಾರ್ಯನಿರ್ವಹಿಸಿ ನಮ್ಮದೇ ಆದ ಸ್ವಂತ ಕಟ್ಟಡವನ್ನು ಹೊಂದಿಸಿಕೊಂಡು ಮಾದರಿಯಾಗಿರುತ್ತೇವೆ ಮಾತ್ರವಲ್ಲ ನೊಂದವರಿಗೆ ನೆರವನ್ನು ನೀಡಿ ಭರವಸೆಯನ್ನು ನೀಡುವಲ್ಲಿ ಯಶಸ್ಸನ್ನು ಕಂಡಿರುತ್ತೇವೆ ಎಂದು ತಿಳಿಸಿದರು.


ಬೆಳಿಗ್ಗೆ ಕುಶಾಲನಗರ ಕೇರಳ ಸಮಾಜದ ಕಟ್ಟಡದಿಂದ ಪ್ರಾರಂಭಗೊಂಡ ಮೆರವಣಿಗೆ ಮಾಲ್ದಾರೆಯ ಶಾಜಿ ರವರು ಮಾವೇಲಿ ವೇಷಧಾರಿಯಾಗಿ ಹಾಗೂ ಚೆಂಡೆ ಮೇಳದ ಸಹಿತ ಎ.ಪಿ.ಸಿ.ಎಂ.ಎಸ್. ಸಭಾಂಗಣದವರೆಗೆ ಸಾಗಿತು ಬಂದಿತು, ಮೆರವಣಿಗೆಯಲ್ಲಿ ಮಲಯಾಳಿ ಸಮಾಜ ಬಾಂಧವರು ಕೇರಳದ ಸಾಂಪ್ರದಾಯಿಕ ಉಡುಪು ಧರಿಸಿ ಪಾಲ್ಗೊಂಡರು. ಆನಂತರದಲ್ಲಿ ಸಭಾಂಗಣದ ನೆಲ ಮಹಡಿಯಲ್ಲಿ ಹೂವಿನ ರಂಗೋಲಿ ಸ್ಪರ್ಧೆ ನಡೆಯಿತು. ಹೂವುಗಳಿಂದ ತಂಡಗಳು ರಂಗೋಲಿ ರಚಿಸಿದವು. ಬಳಿಕ ಮಕ್ಕಳ ಚಿತ್ರಕಲಾ ಸ್ಪರ್ಧೆ ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ನಡೆಯಿತು. ಸಭಾ ಕಾರ್ಯಕ್ರಮ ಆರಂಭದಲ್ಲಿ ಸಮಾಜದ ಕಾರ್ಯದರ್ಶಿ ರೋಬಿನ್ ಕೆ.ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು ಇದೇ ಸಂದರ್ಭ ಸಮಾಜದ ಎರಡನೇ ಅವಧಿಯ (2001-02) ಆಡಳಿತ ಮಂಡಳಿ ಸದಸ್ಯರನ್ನು ಮುಖ್ಯ ಅತಿಥಿಗಳು ಸನ್ಮಾನಿಸಿದರು ಹಾಗೂ ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಮಾಜದ ಸದಸ್ಯರ ಮಕ್ಕಳನ್ನೂ ಗೌರವಿಸಲಾಯಿತು. ಜಂಟಿ ಕಾರ್ಯದರ್ಶಿ ಅಜಿತಾ ಧನರಾಜ್ ಕನ್ನಡ ಆವೃತ್ತಿ ನೀಡಿದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವರಾದ ಅಪ್ಪಚ್ಚುರಂಜನ್ ಅವರು ಮಾತನಾಡಿ, "ಭಾರತೀಯರು ಯಾವುದೇ ಭಾಗದಲ್ಲಿದ್ದರೂ ಶೂರರು. ಇತ್ತೀಚೆಗೆ ನಡೆದ ವಿಮಾನ ಹೈಜಾಕ್ ಪ್ರಕರಣವೇ ಇದಕ್ಕೆ ನಿದರ್ಶನ" ಎಂದು ತಿಳಿಸಿದರು. ಸಂಘದ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡುತ್ತಿರುವುದು ಹಾಗೂ ಸಂಸ್ಕೃತಿ ಉಳಿಸುವ ಕಾರ್ಯಕ್ಕೆ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಸಂಘಟಕರ ಶ್ರಮವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಪಂಚ ಗ್ಯಾರಂಟೀ ಅನುಷ್ಟಾನ ಸಮಿತಿಯ ಅಧ್ಯಕ್ಷರಾದ ವಿಪಿ ಶಶಿಧರ್ ಮಾತನಾಡಿ, "ದೇವರ ನಾಡು ಕೇರಳದ ಹಬ್ಬವನ್ನು ಕೇರಳ ಸಮಾಜ ಬಾಂಧವರು ನಮ್ಮ ಕುಶಾಲನಗರದಲ್ಲಿ ಆಚರಿಸುತ್ತಿರುವುದು ಅನುಕರಣೀಯ. ಪ್ರಸಕ್ತ ದೇಶದ ಪರಿಸ್ಥಿತಿಯಲ್ಲಿ ಇಂತಹ ಐಕ್ಯತೆ ಅಗತ್ಯವಾಗಿದೆ. ಇಂತಹ ಸಮಾರಂಭಗಳು ತಾಯ್ನಾಡಿನಿಂದ ಹೊರಗಿರುವ ನಿಮ್ಮೆಲ್ಲರ ಒಂಟಿತನವನ್ನು ಹೋಗಲಾಡಿಸುತ್ತವೆ" ಎಂದು ಅಭಿಪ್ರಾಯಪಟ್ಟರು. ಕೇರಳ ಕುಲಬಾಂಧವರಿಂದ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವಿ.ಎಂ. ವಿಜಯನ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಎಸ್‌ಎನ್‌ಡಿಪಿ ಶಾಖೆ ಅಧ್ಯಕ್ಷ ಕೆ.ಟಿ. ಗಣೇಶ್ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾಮೆಂಟ್‌ಗಳು (0)