Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ನಂಜರಾಯಪಟ್ಟಣ ಸಹಕಾರ ಸಂಘದ ಮಹಾಸಭೆ: ಆರಂಭದಲ್ಲೇ ಅಧ್ಯಕ್ಷತೆ ಪ್ರಶ್ನೆ, ಸದಸ್ಯರ ಆಕ್ರೋಶ, ಗುಡ್ಡೆಹೊಸೂರು ಶಾಖೆಗೆ ಪ್ರತ್ಯೇಕ ಬ್ಯಾಂಕಿಂಗ್: ಸಂಘ ವಿಭಜನೆಗೆ ಸದಸ್ಯರ ಆಗ್ರಹ

by Kodagu Varadi•ಅಕ್ಟೋಬರ್ 1, 2026BREAKING
ನಂಜರಾಯಪಟ್ಟಣ ಸಹಕಾರ ಸಂಘದ ಮಹಾಸಭೆ: ಆರಂಭದಲ್ಲೇ ಅಧ್ಯಕ್ಷತೆ ಪ್ರಶ್ನೆ, ಸದಸ್ಯರ ಆಕ್ರೋಶ,  ಗುಡ್ಡೆಹೊಸೂರು ಶಾಖೆಗೆ ಪ್ರತ್ಯೇಕ ಬ್ಯಾಂಕಿಂಗ್: ಸಂಘ ವಿಭಜನೆಗೆ ಸದಸ್ಯರ ಆಗ್ರಹ
ನಂಜರಾಯಪಟ್ಟಣ ಸಹಕಾರ ಸಂಘದ ಮಹಾಸಭೆ: ಆರಂಭದಲ್ಲೇ ಅಧ್ಯಕ್ಷತೆ ಪ್ರಶ್ನೆ, ಸದಸ್ಯರ ಆಕ್ರೋಶ,  ಗುಡ್ಡೆಹೊಸೂರು ಶಾಖೆಗೆ ಪ್ರತ್ಯೇಕ ಬ್ಯಾಂಕಿಂಗ್: ಸಂಘ ವಿಭಜನೆಗೆ ಸದಸ್ಯರ ಆಗ್ರಹ image 1

ನಂಜರಾಯಪಟ್ಟಣ ಸಹಕಾರ ಸಂಘದ ಮಹಾಸಭೆ: ಆರಂಭದಲ್ಲೇ ಅಧ್ಯಕ್ಷತೆ ಪ್ರಶ್ನೆ, ಸದಸ್ಯರ ಆಕ್ರೋಶ, ಗುಡ್ಡೆಹೊಸೂರು ಶಾಖೆಗೆ ಪ್ರತ್ಯೇಕ ಬ್ಯಾಂಕಿಂಗ್: ಸಂಘ ವಿಭಜನೆಗೆ ಸದಸ್ಯರ ಆಗ್ರಹ ಕಳೆದ ತಿಂಗಳು ಸೆಪ್ಟೆಂಬರ್ 24 ರಂದು ಜರುಗಿದ ನಂಜರಾಯಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 50ನೇ ವಾರ್ಷಿಕ ಮಹಾಸಭೆಯಲ್ಲಿ ಸಭೆ ಪ್ರಾರಂಭಗೊಳ್ಳುವ ಮುನ್ನವೇ ಗದ್ದಲ ಉಂಟಾಯಿತು. ಆಹ್ವಾನ ಪತ್ರಿಕೆಯಲ್ಲಿ ಅಧ್ಯಕ್ಷ ಬಿ.ಸಿ. ಮುರುಳಿ ಮಾದಯ್ಯ ಅವರ ಹೆಸರಿದ್ದರೂ, ಸಭೆಯನ್ನು ಉಪಾಧ್ಯಕ್ಷ ಬಿ.ಎನ್.ಕಾಶಿ ಅವರು ಮುನ್ನಡೆಸಲು ಹೊರಟಿದ್ದುದೇ ವಿವಾದಕ್ಕೆ ನಾಂದಿಯಾಯಿತು. ಸದಸ್ಯರಾದ ಸಿ.ಎಲ್.ವಿಶ್ವ, ನಂಗಾರು ಜಗ, ಮಹೇಶ್, ಲೋಕನಾಥ್, ಸುಮೇಶ್ ಹಾಗೂ ಎನ್.ಯು.ಅಚ್ಚಯ್ಯ ಸೇರಿ ಹಲವರು ಅಧ್ಯಕ್ಷ ಸ್ವತಃ ಸಭೆಯಲ್ಲಿ ಹಾಜರಿದ್ದರೂ ಉಪಾಧ್ಯಕ್ಷರಿಗೆ ಅಧ್ಯಕ್ಷತೆ ಏಕೆ ಎಂದು ಪ್ರಶ್ನಿಸಿದರು. ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಜಾಹಿರಾತಿನ ಕುರಿತು ಆಕ್ಷೇಪ ವ್ಯಕ್ತಪಡಿಸಿ, ಸಿಇಒ ಅವರಿಂದ ಸ್ಪಷ್ಟನೆ ಕೇಳಲಾಯಿತು. ಸಭೆಯನ್ನೇ ಮೊಟಕುಗೊಳಿಸಬೇಕೆಂಬ ಆಗ್ರಹವೂ ಕೇಳಿಬಂತು. ಗದ್ದಲ ತಣಿಸಲು ಮುಂದಾದ ಉಪಾಧ್ಯಕ್ಷ ಕಾಶಿ ಅವರು, ಅಧ್ಯಕ್ಷ ಮುರುಳಿ ಮಾದಯ್ಯ ಹಾಗೂ ನಿರ್ದೇಶಕರಾದ ಆರ್.ಕೆ.ಚಂದ್ರ, ಬಿ.ಎಸ್.ಧನಪಾಲ್ ಅವರನ್ನು ಮನವೊಲಿಸಿ ವೇದಿಕೆಗೆ ಕರೆತಂದ ಬಳಿಕ, ನಿರ್ದೇಶಕ ಮಹೇಶ್ ಚಂದ್ರ ಅವರು ವಿಷಯ ಬಿಚ್ಚಿಟ್ಟರು — ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಅವರು ಸೋತಿದ್ದರಿಂದ, ನಿಯಮಾನುಸಾರ ಉಪಾಧ್ಯಕ್ಷರಿಗೆ ಅಧ್ಯಕ್ಷ ಸ್ಥಾನ ಒಪ್ಪಿಸಲಾಗಿದೆ ಎಂದರು. ಸಭೆಗಳಿಗೆ ಸಕಾಲಕ್ಕೆ ಬಾರದಿರುವುದು, ನಿರಂತರ ಗೈರುಹಾಜರಿ ಮತ್ತು ಸಾಲದ ಅರ್ಜಿಗಳಿಗೆ ಸಹಿ ಹಾಕುವಲ್ಲಿನ ವಿಳಂಬದಿಂದ ಆಡಳಿತ ವ್ಯವಸ್ಥೆ ಕುಂಠಿತಗೊಂಡಿತ್ತು ಎಂದೂ, ರಾಜೀನಾಮೆ ನೀಡುವ ಭರವಸೆ ಈಡೇರದ ಹಿನ್ನೆಲೆಯಲ್ಲಿ ಅವಿಶ್ವಾಸ ತರಲಾಯಿತು ಎಂದೂ ಸ್ಪಷ್ಟಪಡಿಸಿದರು. ಆರೋಪಗಳಿಗೆ ತಿರುಗೇಟು ನೀಡಿದ ಅಧ್ಯಕ್ಷ ಬಿ.ಸಿ. ಮುರಳಿ ಮಾದಯ್ಯ ಅವರು, ತುರ್ತು ಸಭೆಗಳೆರಡನ್ನು ಬಿಟ್ಟರೆ ಎಲ್ಲ ಮಾಸಿಕ ಸಭೆಗಳಿಗೂ ಹಾಜರಾಗಿರುವುದಾಗಿಯೂ, ಏಳು ವರ್ಷಗಳ ಅಧಿಕಾರಾವಧಿಯಲ್ಲಿ ಸಾಲ ವಿತರಣೆಯಲ್ಲಿ ಯಾವ ಸದಸ್ಯರಿಗೂ ಅನ್ಯಾಯ ಮಾಡಿಲ್ಲವೆಂದೂ ಹೇಳಿದರು. ವೈಯಕ್ತಿಕ ಕಾರಣಗಳಿಂದ ಮೂರು ತಿಂಗಳೊಳಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದನ್ನು ಮೂರು ದಿನ ಎಂದು ತಪ್ಪಾಗಿ ಗ್ರಹಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ ಅವರು, ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿ ವೇದಿಕೆಯಿಂದ ಹೊರನಡೆದರು. *ನಂಜರಾಯಪಟ್ಟಣ ಸಹಕಾರ ಸಂಘದ 50ನೇ ವಾರ್ಷಿಕ ಮಹಾಸಭೆ: ಶೇ.12 ಡಿವಿಡೆಂಟ್, ₹76.02 ಲಕ್ಷ ಲಾಭ ಘೋಷಣೆ* ಗದ್ದಲಗಳ ನಡುವೆ ಬೆಳಗ್ಗೆ ಉದ್ಘಾಟನೆಗೊಳ್ಳಬೇಕಾಗಿದ್ದ ಸಭೆಯು 12:30 ಕ್ಕೆ ಪ್ರಾರಂಭವಾಯಿತು, ಸುಮಾರು 2447 ಕ್ಕು ಅಧಿಕ ಸದಸ್ಯರ ಸಂಖ್ಯಾಬಲವಿರುವ ಸಂಘದ ಸಭೆಯಲ್ಲಿ ಗಲಭೆ ಗದ್ದಲಗಳಿಂದ ಬೇಸತ್ತಿದ್ದ ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ ಹಾಜರಿದ್ದರು. ಅಧ್ಯಕ್ಷ ಕಾಶಿಯವರ ಅನುಮತಿಯ ಮೇರೆಗೆ ಸಭೆಯಲ್ಲಿ ಮಾತನಾಡಿದ ನಿರ್ದೇಶಕರಾದ ಮಹೇಶ್ ಚಂದ್ರ ಅವರು, ಸಭೆಗೆ ಆಗಮಿಸಿದ ಸದಸ್ಯರಿಗೆ, ಆಡಳಿತ ಮಂಡಳಿ ನಿರ್ದೇಶಕರಿಗೆ, ಸ್ವಸಹಾಯ ಗುಂಪುಗಳಿಗೆ, ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಪತ್ರಕರ್ತ ಮಿತ್ರರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಸ್ವಾಗತ ಕೋರಿ ಮಾತು ಆರಂಭಿಸಿದರು. ಆರ್ಥಿಕ ಸಾಧನೆ ಕುರಿತು ಮಹೇಶ್ ಚಂದ್ರ ಸಭೆಯಲ್ಲಿ ಹೇಳಿಕೆ ನೀಡುತ್ತಾ "ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಈ ವರ್ಷ ₹76.02 ಲಕ್ಷ ಲಾಭ ಗಳಿಸಿದೆ. ಸಂಘದಲ್ಲಿ 2,447 ಸದಸ್ಯರಿದ್ದು ₹3.36 ಕೋಟಿ ಪಾಲು ಬಂಡವಾಳ ಹೊಂದಿದೆ" ಎಂದು ಅವರು ತಿಳಿಸಿದರು. ಠೇವಣಿ ಮತ್ತು ಸಾಲ ವಿವರ ನೀಡಿದ ಅವರು, "ಸಂಘದಲ್ಲಿ ಸಂಚಯ ಠೇವಣಿ ₹12.04 ಕೋಟಿ, ನಿರಖು ಠೇವಣಿ ₹26.96 ಕೋಟಿ ಸೇರಿ ಒಟ್ಟು ₹40.77 ಕೋಟಿ ಠೇವಣಿ ಇದೆ. ಕೃಷಿ ಸಾಲ ₹11 ಕೋಟಿ, ಮಧ್ಯಮಾವಧಿ ಸಾಲ ₹4 ಕೋಟಿ, ಜಾಮೀನು ಸಾಲ ₹6 ಕೋಟಿ, ಗೃಹ ಸಾಲ ₹9 ಕೋಟಿ ಸೇರಿ ಒಟ್ಟು ₹37.62 ಕೋಟಿ ಸಾಲ ವಿತರಿಸಲಾಗಿದೆ" ಎಂದು ವಿವರಿಸಿದರು. ವ್ಯಾಪಾರ ವಿಭಾಗದಲ್ಲಿ ಕಳೆದ ವರ್ಷದ ₹9.27 ಕೋಟಿಗೆ ಹೋಲಿಸಿದರೆ ಈ ವರ್ಷ ₹10.48 ಕೋಟಿ ವಹಿವಾಟು ನಡೆಸಲಾಗಿದೆ ಎಂದೂ ಅವರು ತಿಳಿಸಿದರು. ಸಂಘದ ಬಳಿ ಇರುವ 1 ಲಾರಿ ಹಾಗೂ 2 ಟ್ರಾಕ್ಟರ್‌ಗಳನ್ನು ರೈತ ಸದಸ್ಯರಿಗೆ ಉಳುಮೆ, ಕೃಷಿ ಕೆಲಸ ಮತ್ತು ಸಾಗಾಣಿಕೆಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು. *ಡಿವಿಡೆಂಟ್ ಮತ್ತು ಬೋನಸ್:* "ಸಂಘದ ಆಡಳಿತ ಮಂಡಳಿ ಸಭೆ ಈ ವರ್ಷ ಸದಸ್ಯರಿಗೆ ಶೇ.12ರಷ್ಟು ಡಿವಿಡೆಂಟ್ ಹಾಗೂ ಸಿಬ್ಬಂದಿಗೆ 2 ತಿಂಗಳ ಬೋನಸ್ ವಿತರಿಸಲು ತೀರ್ಮಾನಿಸಿದೆ" ಎಂದು ಮಹೇಶ್ ಚಂದ್ರ ಸಭೆಯ ಅನುಮೋದನೆ ಕೋರಿದರು. *ಮೂಲಸೌಕರ್ಯ ಯೋಜನೆಗಳು:* ಮುಖ್ಯ ಕಚೇರಿಯ ಹಿಂಭಾಗ ನೌಕರರು, ಚಾಲಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಾಣ, ಗುಡ್ಡೆಹೊಸೂರು ಶಾಖೆಯ ಮುಂಭಾಗ ಶೀಟ್ ಮತ್ತು ಇಂಟರ್‌ಲಾಕ್ ಕಾಮಗಾರಿ, ವಾಲ್ಲೂರು ಶಾಖೆಯ ಮೊದಲ ಅಂತಸ್ತಿನ ಮೆಟ್ಟಿಲಿನ ಬಳಿ ಗ್ರಾಹಕರ ಅನುಕೂಲ ಹಾಗೂ ಮಳೆಗಾಲದಲ್ಲಿ ಗೊಬ್ಬರ ಲೋಡ್-ಅನ್‌ಲೋಡ್‌ಗೆ ನೆರವಾಗುವಂತೆ ಶೀಟ್ ಅಳವಡಿಕೆ, ಹಾಗೂ ಕುಡಿಯುವ ನೀರಿನ ಘಟಕದ ಮೇಲ್ಭಾಗದಲ್ಲಿ ರಾತ್ರಿ ಕಾವಲುಗಾರರ ಕೊಠಡಿ ನಿರ್ಮಾಣ ಯೋಜನೆಗಳಿಗೆ ಸಭೆಯ ಅನುಮತಿ ಕೋರಿದರು. *ಕುಡಿಯುವ ನೀರಿನ ಘಟಕ:* "ಸಂಘದ ಕುಡಿಯುವ ನೀರಿನ ಘಟಕ ನಷ್ಟದಲ್ಲಿದ್ದು, ಸದಸ್ಯರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ 20 ಲೀಟರ್ ನೀರಿಗೆ ₹5 ದರ ನಿಗದಿಪಡಿಸಲು ತೀರ್ಮಾನಿಸಲಾಗಿದೆ" ಎಂದು ಅವರು ತಿಳಿಸಿದರು. *ಶಾಖೆಗಳು ಮತ್ತು ಸೇವೆಗಳು:* ಸಂಘವು ನಂಜರಾಯಪಟ್ಟಣ, ವಾಲ್ಲೂರು ಮತ್ತು ಗುಡ್ಡೆಹೊಸೂರು ಗ್ರಾಮಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಇವುಗಳ ಮೂಲಕ ರಸಗೊಬ್ಬರ, ದಿನಸಿ, ಕ್ರಿಮಿನಾಶಕ, ಕೀಟನಾಶಕ ಹಾಗೂ ಗ್ರಾಹಕರ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂದು ಮಹೇಶ್ ಚಂದ್ರ ವಿವರಿಸಿದರು. ಸಂಘದ ವ್ಯಾಪ್ತಿಯ ಶಾಲೆಗಳ 10ನೇ ಮತ್ತು 7ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ 3 ವಿದ್ಯಾರ್ಥಿಗಳಿಗೆ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 6 ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು ಹಾಗೂ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಂಘದ ವ್ಯಾಪ್ತಿಯ ಎಲ್ಲಾ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಗುವುದು ಎಂದು ಮಹೇಶ್ ಚಂದ್ರ ಪ್ರಕಟಿಸಿದರು. "ಸ್ವಸಹಾಯ ಸಂಘದ ಸದಸ್ಯರ ಅನುಕೂಲಕ್ಕಾಗಿ ಸ್ಥಳೀಯ ಸ್ವಸಹಾಯ ಸಂಘಗಳಿಗೆ ₹10 ಲಕ್ಷ ಸಾಲ ನೀಡಲಾಗುವುದು. ಈ ವರ್ಷ ನಂಜರಾಯಪಟ್ಟಣ ಧವಸ ಭಂಡಾರಕ್ಕೆ ₹8 ಲಕ್ಷ ಸಾಲ ವಿತರಿಸಲಾಗಿದ್ದು, ಮುಂದಿನ ವರ್ಷದಿಂದ ಸ್ಥಳೀಯ ಧವಸ ಭಂಡಾರ ಹಾಗೂ ಸಹಕಾರ ಸಂಘಗಳಿಗೆ ₹20 ಲಕ್ಷ ಮಂಜೂರು ಮಾಡಲು ತೀರ್ಮಾನಿಸಲಾಗಿದೆ. ಸದಸ್ಯರಿಗೆ ವ್ಯಾಪಾರ ಸಾಲ ಹಾಗೂ ಪಿಗ್ಮಿ ಸಾಲದ ಮೊತ್ತವನ್ನೂ ಹೆಚ್ಚಿಸಲಾಗುವುದು" ಎಂದು ಮಹೇಶ್ ಚಂದ್ರ ಸಭೆಗೆ ತಿಳಿಸಿದರು. *ಐದು ದಶಕಗಳ ಭವ್ಯ ಇತಿಹಾಸವಿರುವ ಸಂಸ್ಥೆಯಲ್ಲಿ ಆಡಳಿತ ಮಂಡಳಿ, ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ ಇದಕ್ಕೆ ಆಂತರಿಕ ಕಲಹವೇ ಕಾರಣ ಎಂದು ಸದಸ್ಯರುಗಳು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು,* ​ಸಭೆಯಲ್ಲಿ ವಿಷಯ ಮಂಡಿಸಿದ ಸದಸ್ಯ ಲೋಕನಾಥ್ ಅವರು, ಆಡಳಿತ ವ್ಯವಸ್ಥೆಯಲ್ಲಿ ಉಂಟಾಗಿರುವ ಲೋಪದೋಷಗಳು ಹಾಗೂ ವೈಫಲ್ಯಗಳನ್ನು ಪಟ್ಟಿ ಮಾಡಿ ಸಭೆಯ ಗಮನಕ್ಕೆ ತಂದರು. ಈ ಕೂಡಲೇ ಮಂಡಳಿಯು ತನ್ನ ಧೋರಣೆಯನ್ನು ಬದಲಾಯಿಸಿಕೊಂಡು ಸಂಸ್ಥೆಯ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು ಎಂದು ಎಚ್ಚರಿಸಿದರು. ​ಇದೇ ವೇಳೆ ನಿರ್ದೇಶಕರ ಧೋರಣೆಯನ್ನು ಖಂಡಿಸಿದ ಸದಸ್ಯರಾದ ಸಿ.ಎಲ್. ವಿಶ್ವ, "ಹಿರಿಯರು ಕಟ್ಟಿ ಬೆಳೆಸಿದ ಈ ಸಂಸ್ಥೆಯನ್ನು ನಿರ್ದೇಶಕರು ತಮ್ಮ ವೈಯಕ್ತಿಕ ವೈಮನಸ್ಸಿನಿಂದ ಹಾಳುಮಾಡಬಾರದು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಒಗ್ಗಟ್ಟಿನಿಂದ ಮುನ್ನಡೆಯಬೇಕು" ಎಂದು ಆಗ್ರಹಿಸಿದರು. ​ಇನ್ನೊಂದೆಡೆ, ಗುಡ್ಡೆಹೊಸೂರು ಭಾಗದ ಬೆಳವಣಿಗೆಯ ದೃಷ್ಟಿಯಿಂದ ಮಾತೃ ಸಂಘದ ಮಾದರಿಯಲ್ಲೇ ಸದಸ್ಯರನ್ನು ವಿಂಗಡಿಸಿ, ಸಂಘವನ್ನು ವಿಭಜಿಸುವ ಮೂಲಕ ಪ್ರತ್ಯೇಕ ಬ್ಯಾಂಕಿಂಗ್ ವ್ಯವಹಾರಕ್ಕೆ ಚಾಲನೆ ನೀಡಬೇಕು ಎಂದು ಸದಸ್ಯರಾದ ನಂಗಾರು ಜಗ ,ಸಾಗರ್, ಪ್ರದೀಪ್ ಹಾಗೂ ಇತರರು ಆಡಳಿತ ಮಂಡಳಿಯನ್ನು ಒತ್ತಾಯಿಸಿದರು. ಸಭೆಯಲ್ಲಿ ನಿರ್ದೇಶಕರುಗಳಾದ ಕೆ.ಡಿ.ದಾದಪ್ಪ, ವಿ.ಎಸ್.ರಾಜಪ್ಪ,ಎಸ್.ಎಸ್.ಕಾರ್ಯಪ್ಪ, ಎನ್.ಸಿ.ಪಂಚಾಕ್ಷರಿ, ಎಸ್.ಬಿ .ಅನಿತ,ಕೆ.ಕೆ .ಲೀಲಾವತಿ, ಟಿ .ಕೆ.ಉದಯಕುಮಾರ್ ಶಾಖೆಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ.ಲತೀಶ್, ಸಿಬ್ಬಂದಿಗಳು ಹಾಗೂ ಸಾವಿರಾರು ಸದಸ್ಯರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!