ಕುಶಾಲನಗರ, ಅ.7: ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಬೆಟ್ಟಗೇರಿ ಗ್ರಾಮದ ಅಂಗನವಾಡಿ ಕೇಂದ್ರವನ್ನು ನವೀಕರಿಸಿ 'ಮಕ್ಕಳ ಸ್ನೇಹಿ ಅಂಗನವಾಡಿ ಕೇಂದ್ರ'ವಾಗಿ ರೂಪಾಂತರಿಸಲಾಗಿದೆ. ಪಂಚಾಯತಿ ವ್ಯಾಪ್ತಿಯಲ್ಲಿ ಈ ರೀತಿ ಅಭಿವೃದ್ಧಿಗೊಂಡ ಮೂರನೇ ಕೇಂದ್ರ ಇದಾಗಿದೆ. ಮಂದ ಬಣ್ಣದ ಗೋಡೆಗಳು ಮತ್ತು ಆಕರ್ಷಣೆಯಿಲ್ಲದ ಕಟ್ಟಡದಿಂದಾಗಿ ಮಕ್ಕಳು ಕೇಂದ್ರಕ್ಕೆ ಬರಲು ಹಿಂಜರಿಯುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪಂಚಾಯತಿ ಆಡಳಿತ, ಕಟ್ಟಡಕ್ಕೆ ಸಂಪೂರ್ಣ ಕಾಯಕಲ್ಪ ನೀಡಿದೆ. ಗೋಡೆಗಳ ಮೇಲೆ ಅಕ್ಷರಮಾಲೆ, ಸಂಖ್ಯೆಗಳು, ಪ್ರಾಣಿ-ಪಕ್ಷಿಗಳು, ಹಣ್ಣು-ಹೂವುಗಳು ಹಾಗೂ ಕಥೆಗಳ ವರ್ಣಚಿತ್ರಗಳನ್ನು ಬಿಡಿಸಲಾಗಿದ್ದು, ಇಡೀ ಕಟ್ಟಡವೇ ಕಲಿಕೆಗೆ ಪೂರಕವಾಗುವಂತೆ ರೂಪುಗೊಂಡಿದೆ. ಬರಿ ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದ ಮಕ್ಕಳಿಗೆ ಈಗ ಮೆದುವಾದ, ಬಣ್ಣದ ಸುರಕ್ಷಿತ ಮ್ಯಾಟ್‌ಗಳನ್ನು ಹಾಸಲಾಗಿದೆ. ಜೊತೆಗೆ ಮಕ್ಕಳ ಶರೀರ ವಿನ್ಯಾಸಕ್ಕೆ ಸೂಕ್ತವಾದ ಸಣ್ಣ ಕುರ್ಚಿ ಮತ್ತು ಮೇಜುಗಳನ್ನು ಒದಗಿಸಲಾಗಿದೆ. ಹಳೆಯ ಮೂಲಸೌಕರ್ಯಗಳನ್ನು ಸರಿಪಡಿಸಿ ಶುಚಿತ್ವ ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಆಟದ ಮೂಲಕ ಕಲಿಯಲು ಅನುಕೂಲವಾಗುವ ವಾತಾವರಣವನ್ನೂ ನಿರ್ಮಿಸಲಾಗಿದೆ. ಗ್ರಾಮಸ್ಥರು ಈ ಸೌಲಭ್ಯದ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿರುವ ಅಂಗನವಾಡಿ ಕಾರ್ಯಕರ್ತೆ ಸೌಮ್ಯ ಅವರು, 3ರಿಂದ 6 ವರ್ಷದೊಳಗಿನ ಮಕ್ಕಳನ್ನು ಪೋಷಕರು ಯಾವುದೇ ಹಿಂಜರಿಕೆಯಿಲ್ಲದೆ ಕೇಂದ್ರಕ್ಕೆ ಕಳುಹಿಸಿ, ಅವರ ಉಜ್ವಲ ಭವಿಷ್ಯಕ್ಕೆ ಸಹಕರಿಸಿ ಎಂದು ವಿನಂತಿಸಿದ್ದಾರೆ. ಅಂಗನವಾಡಿಗೆ ಕಾಯಕಲ್ಪದ ಕುರಿತಾಗಿ ಹೇಳಿಕೆ ನೀಡಿರುವ ಗುಡ್ಡೆಹೊಸೂರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮೇಶ್ ಎಂ.ಆರ್., "ಹಿಂದೆ ಈ ಕಟ್ಟಡ ಹಳೆಯದಾಗಿ ಕಾಣುತ್ತಿದ್ದು, ಮಕ್ಕಳ ಹಾಜರಾತಿ ಕಡಿಮೆಯಾಗಿತ್ತು. ಅದಕ್ಕಾಗಿ ಸಂಪೂರ್ಣ ಕಾಯಕಲ್ಪ ನೀಡಿದ್ದೇವೆ. ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಇದು 3ನೇ ಮಕ್ಕಳ ಸ್ನೇಹಿ ಅಂಗನವಾಡಿಯಾಗಿದ್ದು, ದೊಡ್ಡಬೆಟ್ಟಗೇರಿಯ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಅಡಿಪಾಯ ನೀಡಲಿದೆ" ಎಂದು ಆಶಯ ವ್ಯಕ್ತ ಪಡಿಸಿದ್ದಾರೆ




ಕಾಮೆಂಟ್‌ಗಳು (0)