ನಾಪೋಕ್ಲು: ಕೊಡಗಿನ ಮೂಲನಿವಾಸಿಗಳ ವಿಶಿಷ್ಟ ಸಂಸ್ಕೃತಿ, ಉಡುಪು, ನೆಲ-ಜಲ, ದೇವರಕಾಡು ಹಾಗೂ ಅತೀ ಮುಖ್ಯವಾಗಿ ಶ್ರೀ ಇಗ್ಗುತ್ತಪ್ಪ ದೇವರು ನೆಲೆನಿಂತ ಪವಿತ್ರ ಮಲ್ಮ ಬೆಟ್ಟವನ್ನು ಸಾಂಪ್ರದಾಯಿಕವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಅನಿವಾಸಿ ಭಾರತೀಯರಾದ ಬಲ್ಯಾಟಂಡ ಕವೇರ ಪೂಣಚ್ಚ ಅವರ ನೇತೃತ್ವದಲ್ಲಿ ‘ಕೊಡಗು ಶಕ್ತಿ ನಡ್ಪು’ ಬೃಹತ್ ಪಾದಯಾತ್ರೆ ಯಶಸ್ವಿಯಾಗಿ ನೆರವೇರಿತು. ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ದೇಶ ತಕ್ಕರಾದ ಪರದಂಡ ಪ್ರಿನ್ಸ್ ಅವರ ವಿಶೇಷ ಪ್ರಾರ್ಥನೆ ಹಾಗೂ ತಾಯಿ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಈ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಲಾಯಿತು.



ಬಾಗಮಂಡಲ ಮತ್ತು ಅಯ್ಯಂಗೇರಿ ಮಾರ್ಗವಾಗಿ ಸಾಗಿದ ಪಾದಯಾತ್ರೆಯನ್ನು ಪುಲಿಕೋಟು ಗ್ರಾಮದಲ್ಲಿ ಕರವಂಡ, ಪೆಬ್ಬಟ್ಟಿರ, ಮುಕ್ಕಾಟಿರ ಹಾಗೂ ಮಣವಟ್ಟಿರ ಕುಟುಂಬಸ್ಥರು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿ ಆತಿಥ್ಯ ನೀಡಿದರು. ಅಲ್ಲಿಂದ ಮುನ್ನಡೆದ ‘ಕೊಡಗು ಶಕ್ತಿ ನಡ್ಪು’ ತಂಡವು ಪೇರೂರು ಶ್ರೀ ಇಗ್ಗುತ್ತಪ್ಪ ದೇವರ ದರ್ಶನ ಪಡೆದು, ಬಳಿಕ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿತು. ನಂತರ ಕಾಲ್ನಡಿಗೆಯ ಮೂಲಕ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನವನ್ನು ತಲುಪಿ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಯನ್ನು ಮುಕ್ತಾಯಗೊಳಿಸಲಾಯಿತು. ಪಾದಯಾತ್ರೆಯುದ್ದಕ್ಕೂ ಚೋಕಿರ ಅನಿತಾ ಹಾಗೂ ಮಾಳೇಟಿರ ಶ್ರೀನಿವಾಸ್ ಅವರು ಕೊಡಗಿನ ಪ್ರಕೃತಿ ಮತ್ತು ಸಂಸ್ಕೃತಿಯ ರಕ್ಷಣೆಯ ಉದ್ದೇಶಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಅರ್ಥಪೂರ್ಣ ಪ್ರಚಾರ ನಡೆಸಿದರು. ಈ ಪಾದಯಾತ್ರೆಯಲ್ಲಿ ಬಾಲ್ಯಾಟಂಡ ಕೌಶಿಕ್ ಕುಟ್ಟಯ್ಯ, ನೆಲಜಿ ಗ್ರಾಮದ ಮಲ್ಮ ಹಿತರಕ್ಷಣಾ ಮುಖ್ಯ ಸಮಿತಿಯ ಮಣವಟ್ಟಿರ ಹರೀಶ್ ಕುಶಾಲಪ್ಪ, ಏ.ಕೆ ಮನು ಮುತ್ತಪ್ಪ ಮಣವಟ್ಟಿರ ಅರುಣ್ ಪಳಂಗಪ್ಪ, ಮಂಡೀರ ಸಚಿನ್, ರಿಪ್ಪನ್, ಕೈಬುಲಿರ ಸಾಬು ಗಣಪತಿ, ದಿನು ಕಾವೇರಪ್ಪ, ಉಮೇಶ್ ಉತ್ತಪ್ಪ, ಮಚ್ಚುರ ರವೀಂದ್ರ, ಚಂಗೇಟಿರ ಕುಶಾಲಪ್ಪ, ಮಾಳೆಯಂಡ ವಿಜು ಅಪ್ಪಚ್ಚ, ಜಗಧ ಈರಪ್ಪ, ಕರವಂಡ ಲವ ನಾಣಯ್ಯ, ಚೀಯಕಪೂವಂಡ ಸುನೀಲ್ ಮಾಚಯ್ಯ, ಬಾಳೆಯಡ ಲವ ಬೆಳ್ಯಪ್ಪ ಸೇರಿದಂತೆ ನೆಲಜಿ, ಬಲ್ಲಮಾವಟಿ, ಪೇರೂರು ಗ್ರಾಮಸ್ಥರು ಸಕ್ರಿಯವಾಗಿ ಭಾಗವಹಿಸಿದ್ದರು. ಅಲ್ಲದೆ, ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್, ಕನೆಕ್ಟಿಂಗ್ ಕೊಡವಾಸ್, ವಿರಾಜಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಮಾಳೆಟೀರ ಶ್ರೀನಿವಾಸ್, ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕರಾದ ಮೂಕಳೆರ ಕಾವ್ಯ, ವಿರಾಜಪೇಟೆಯ ಪೊಮ್ಮಕ್ಕಡ ಕೂಟ, ತಿಂಗಕೋರ್ ಮೊಟ್ ತಂಡ, ಚೇರಂಬಾಣಿ ಕೊಡವ ಸಮಾಜ, ನಾಪೋಕ್ಲು ಭಗವತಿ ಸಂಘ ಹಾಗೂ ಆದಿ ಬೈತೂರು ಸಂಘ ವಿರಾಜಪೇಟೆಯ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ನೂರಾರು ಕೊಡವ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವರದಿ ✍️ ದುಗ್ಗಳ ಸದಾನಂದ..

ಕಾಮೆಂಟ್‌ಗಳು (0)