ಕುಶಾಲನಗರ: ಪಡಿತರ ಚೀಟಿದಾರರ ಕೆ.ವೈ.ಸಿ. ನವೀಕರಣ ನಿಧಾನವಾಗಿದೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಕುಶಾಲನಗರದ ನ್ಯಾಯಬೆಲೆ ಅಂಗಡಿಗೆ ಹಠಾತ್ ಭೇಟಿ ನೀಡಿ ಪರಿಶೀಲಿಸಿದರು. ನ್ಯಾಯಬೆಲೆ ಅಂಗಡಿಯಲ್ಲಿ ಕುಮಾರ್ ಎಂಬ ಒಬ್ಬರೇ ಸಿಬ್ಬಂದಿ ಇದ್ದು ಅಕ್ಕಿ ತುಂಬಿದ ಲಾರಿ ಬಂದಿದ್ದರಿಂದ ಗೋದಾಮಿನಲ್ಲಿ ಇಳಿಸಿ ಜೋಡಿಸುವ ಕೆಲಸದಲ್ಲೇ ಅವರು ನಿರತರಾಗಿದ್ದು, ದಿನದ ಕೆ.ವೈ.ಸಿ. ನವೀಕರಣ ನಡೆದಿರಲಿಲ್ಲ. ಹಾಗೂ ಅಂಗಡಿಯಲ್ಲಿ ಸುಮಾರು 5,000 ಫಲಾನುಭವಿಗಳಿದ್ದು, ಇದುವರೆಗೆ ಅರ್ಧದಷ್ಟು, ಅಂದರೆ 2,500 ಮಂದಿಯ ನವೀಕರಣ ಮಾತ್ರ ಪೂರ್ಣಗೊಂಡಿದೆ. ಉಳಿದವರದ್ದನ್ನು ಈ ತಿಂಗಳ 17ರೊಳಗೆ ಮುಗಿಸಬೇಕಿದ್ದು, ಸರ್ವರ್ ಸಮಸ್ಯೆಯೂ ಅಡ್ಡಿಯಾಗಿದೆ ಎಂದು ಅವರು ತಿಳಿಸಿದರು.


ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಅವರಿಗೆ ಕರೆ ಮಾಡಿ ವಿಚಾರಿಸಿದಾಗ, ಗೋದಾಮಿನ ಲೆಕ್ಕ ನಿರ್ವಹಣೆ, ಕೆ.ವೈ.ಸಿ. ನವೀಕರಣ ಹಾಗೂ ಸಂಜೆ 6 ಗಂಟೆಯ ನಂತರ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ ತಲುಪಿಸುವ ಕೆಲಸ, ಎಲ್ಲವೂ ಇದೇ ಒಬ್ಬ ಸಿಬ್ಬಂದಿಯ ಮೇಲಿರುವುದು ತಿಳಿದು ಬಂದಿದೆ. ಹೀಗಾಗಿ ಸೋಮವಾರದೊಳಗೆ ಹೆಚ್ಚುವರಿ ಸಿಬ್ಬಂದಿ ನೇಮಿಸಿ, ಕೆ.ವೈ.ಸಿ. ಕಾರ್ಯವನ್ನು ಶೀಘ್ರ ಮುಗಿಸಬೇಕೆಂದು ವೇದಿಕೆ ಒತ್ತಾಯಿಸಿತು. ಇದೇ ಸಂದರ್ಭ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಡಿ.ವಿ. ನಾಗೇಶ್, ಕೆ.ಆರ್. ರಾಜೇಶ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ದಿವ್ಯಾ ದೇವಾಂಗ, ತಾಲ್ಲೂಕು ಅಧ್ಯಕ್ಷೆ ಹಾನಗಲ್ ರೂಪಾ ಗಣೇಶ್, ಕಾರ್ಯದರ್ಶಿ ಅನಿತಾ ದೇವಾಂಗ ಮತ್ತಿತರರು ಹಾಜರಿದ್ದರು. ✍️ ಪ್ರಿತುನ್ ಪೂವನ್ನ

ಕಾಮೆಂಟ್ಗಳು (0)