Google search engine
Home♦️ಇತ್ತೀಚಿನ ಸುದ್ದಿಗಳು. ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟ ಮತ್ತು ಸುಧಾರಿತ ಭತ್ತದ ಕೃಷಿ ಮಾಹಿತಿ ಕಾರ್ಯಗಾರ: ಪತ್ರಕರ್ತರು ಇಲಾಖೆಯ ರಾಯಭಾರಿಗಳಾಗಿ ಕಾರ್ಯನಿರ್ವಹಿಸಲಿ:...

 ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟ ಮತ್ತು ಸುಧಾರಿತ ಭತ್ತದ ಕೃಷಿ ಮಾಹಿತಿ ಕಾರ್ಯಗಾರ: ಪತ್ರಕರ್ತರು ಇಲಾಖೆಯ ರಾಯಭಾರಿಗಳಾಗಿ ಕಾರ್ಯನಿರ್ವಹಿಸಲಿ: ಡಾ. ಆರ್.ಎನ್. ಕೆಂಚಾರೆಡ್ಡಿ

ಪೊನ್ನಂಪೇಟೆ, ಆ.2: ಕೊಡಗು ಪತ್ರಕರ್ತರ ಸಂಘ (ರಿ.) ಪೊನ್ನಂಪೇಟೆ ತಾಲೂಕು ಘಟಕದ ವತಿಯಿಂದ ಆಗಸ್ಟ್ 1 ರಂದು. ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯ ಆವರಣದಲ್ಲಿ ಕೆಸರುಗದ್ದೆ ಕ್ರೀಡಾಕೂಟ ಹಾಗೂ ಸುಧಾರಿತ ಭತ್ತದ ಕೃಷಿ ಮಾಹಿತಿ ಕಾರ್ಯಗಾರ ಆಯೋಜಿಸಲಾಗಿತ್ತು.

  ಕಾರ್ಯಗಾರದಲ್ಲಿ ಮಡಿಕೇರಿಯ  ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ. ಆರ್.ಎನ್. ಕೆಂಚಾರೆಡ್ಡಿ ಅವರು ಮಾತನಾಡಿ  ಪತ್ರಕರ್ತರು ಇಲಾಖೆಯ ರಾಯಭಾರಿಗಳಂತೆ ಕಾರ್ಯನಿರ್ವಹಿಸಿ , ಸಂಸ್ಥೆಯ ವಿವಿಧ ಅವಕಾಶ ಹಾಗೂ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಪರಿಚಯಿಸಬೇಕೆಂದು ಮನವಿ ಮಾಡಿದರು. 

ಪೊನ್ನಂಪೇಟೆಯ ಹೆಚ್ಚಿನ ಆರ್ದ್ರತೆ, ಕನಿಷ್ಠ ತಾಪಮಾನ ಮತ್ತು ದೀರ್ಘಕಾಲ ಬೀಳುವ ಮಳೆಯಿಂದಾಗಿ ಭತ್ತದ ಬೆಳೆಗೆ ಬೆಂಕಿ ರೋಗ ತಗುಲಿಸುವ ಶಿಲೀಂಧ್ರ ಬೆಳೆಯಲು ಇಲ್ಲಿನ ವಾತಾವರಣ ಅನುಕೂಲಕರವಾಗಿದ್ದು, ಇದೆ ಕಾರಣಕ್ಕೆ ಪೊನ್ನಂಪೇಟೆಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರವು ಬತ್ತದ ತಳಿಗಳ ಬೆಂಕಿ ರೋಗ ನಿರೋಧಕ ಪರೀಕ್ಷೆಗಾಗಿ “ಅಂತಾರಾಷ್ಟ್ರೀಯ ಪರೀಕ್ಷಾ ಕೇಂದ್ರ” ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.

ಸಸಿ ಮಡಿ ಪದ್ಧತಿ ವೆಚ್ಚದಾಯಕವಾಗಿರುವುದರಿಂದ ಡ್ರಮ್ ಸೀಡಿಂಗ್, ನೇರ ಬಿತ್ತನೆ ಹಾಗೂ ಯಂತ್ರದ ಮೂಲಕ ನಾಟಿ ಮಾಡುವ ವಿಧಾನಗಳನ್ನು ಅಳವಡಿಸಿಕೊಂಡರೆ ಕೂಲಿ ಕಾರ್ಮಿಕ ಸಮಸ್ಯೆ ಹಾಗೂ ಖರ್ಚು ಎರಡನ್ನೂ ಕಡಿಮೆ ಮಾಡಬಹುದು ಎಂದು ಡಾ. ಕೆಂಚಾರೆಡ್ಡಿ ಸಲಹೆ ನೀಡಿದರು. ಕೊಡಗಿನಲ್ಲಿ ಭತ್ತದ ಕೃಷಿ ಆರ್ಥಿಕವಾಗಿ ಲಾಭದಾಯಕವಾಗಿಲ್ಲದ ಕಾರಣ ರೈತರು ಈ ಬೆಳೆಯಿಂದ ವಿಮುಖರಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ವರ್ಷಕ್ಕೆ ಒಂದೇ ಬೆಳೆಗೆ ಸೀಮಿತವಾಗಿರುವ ಕಾರಣ ರೋಗನಿರೋಧಕ, ಕೀಟನಾಶಕ ಹಾಗೂ ಕಳೆನಾಶಕ ಔಷಧಿಗಳ ಬಳಕೆ ಕಡಿಮೆ ಪ್ರಮಾಣದಲ್ಲಿದೆ  ಇದರಿಂದ ಕೊಡಗಿನಲ್ಲಿ ಬೆಳೆಯುವ  ಭತ್ತ ಅತ್ಯಂತ ಉತ್ಕೃಷ್ಟ ಮಟ್ಟದ್ದಾಗಿದೆ ಎಂದು ತಿಳಿಸಿದರು.

ತುಂಗಾ ಭತ್ತ ಬೀಜದ ಮಾದರಿಯಲ್ಲಿ ಸ್ಥಳೀಯ ಕೆ.ಪಿ.ಆರ್-1 ಬಿತ್ತನೆ ಬೀಜದ ಆವಿಷ್ಕಾರ

ಕಾರ್ಯಕ್ರಮದಲ್ಲಿ ಕ್ಷೇತ್ರ ಅಧೀಕ್ಷಕ ಡಾ. ಸಿ. ಪ್ರಶಾಂತ್ ಅವರು ಮಾತನಾಡಿ ಪೊನ್ನಂಪೇಟೆಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಘಟಕದಲ್ಲಿ ಹೆಚ್ಚು ಇಳುವರಿ ನೀಡುವ ಸುಧಾರಿತ ತುಂಗಾ ಭತ್ತದ ಬೀಜದ ಮಾದರಿಯಲ್ಲಿ ಸ್ಥಳೀಯವಾಗಿ ಕೆ.ಪಿ.ಆರ್-1 ಬತ್ತದ ಬೀಜವನ್ನು ಆವಿಷ್ಕರಿಸಲಾಗಿದ್ದು, ಇದು ಎಕರೆಗೆ 20 ರಿಂದ 25 ಕ್ವಿಂಟಾಲ್ ಇಳುವರಿ ನೀಡುತ್ತದೆ ಹಾಗೂ ಈ ದೇಸಿ ತಳಿಯ ಸುಮಾರು 100 ರಿಂದ 120 ಕ್ವಿಂಟಾಲ್ ಬಿತ್ತನೆ ಬೀಜವನ್ನು ಪ್ರತಿ ವರ್ಷ ಕೊಡಗಿನಾದ್ಯಂತ ರೈತರಿಗೆ ವಿತರಿಸಲಾಗುತ್ತಿದೆ ಎಂದೂ ಅವರು ಮಾಹಿತಿ ನೀಡಿದರು.

ಬತ್ತದ ಬೆಳೆಗೆ ಬಾಧಿಸುವ ಬೆಂಕಿ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಪೊನ್ನಂಪೇಟೆಯ ಕೃಷಿ ವಿಜ್ಞಾನ ಸಂಸ್ಥೆಯಲ್ಲಿ  ನಿರಂತರವಾಗಿ ಸಂಶೋಧನೆಗಳು ನಡೆಯುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗುವ ಪ್ರತಿಯೊಂದು ಭತ್ತದ ತಳಿಯನ್ನೂ ಈ ಕೇಂದ್ರದಲ್ಲಿ ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಡಾ. ಪ್ರಶಾಂತ್ ವಿವರಿಸಿದರು. ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರೈಸ್ ರಿಸರ್ಚ್ ಸಂಸ್ಥೆಯ ಆಧೀನದಲ್ಲಿರುವ ಈ ಘಟಕವು ಪ್ರತಿವರ್ಷ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಬತ್ತದ ತಳಿಗಳ ಮೇಲೆ ಸಂಶೋಧನೆ ನಡೆಸಿ, ಉತ್ತಮ ತಳಿಗಳನ್ನು ಗುರುತಿಸಿ ಅಧಿಕೃತಗೊಳಿಸುತ್ತದೆ.    ಇದರ ಜೊತೆಗೆ ಬೆಂಕಿ ರೋಗ ತಗುಲದೆ ಉತ್ತಮವಾಗಿ ಬೆಳೆಯುವ ಬತ್ತದ ತಳಿಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವುದು, ಜೈವಿಕ ಔಷಧಗಳು ಮತ್ತು ಶಿಲೀಂಧ್ರನಾಶಕಗಳ ಸೂಕ್ತ ಪ್ರಮಾಣವನ್ನು ಪ್ರಯೋಗದ ಮೂಲಕ ಪರೀಕ್ಷಿಸುವುದು ಹಾಗೂ ರಾಸಾಯನಿಕ ಬಳಸದೆ ಸಾವಯವ, ನೈಸರ್ಗಿಕ ವಿಧಾನಗಳ ಮೂಲಕ ಬೆಂಕಿ ರೋಗ ನಿಯಂತ್ರಿಸುವ ಮಾರ್ಗೋಪಾಯ ಕಂಡುಕೊಳ್ಳುವುದೇ ಸಂಸ್ಥೆಯ ಗುರಿಯಾಗಿದೆ ಎಂದು ಡಾ. ಪ್ರಶಾಂತ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಕೊಡಗು ಪತ್ರಕರ್ತರ ಸಂಘವು ಅರಣ್ಯ ಮಹಾವಿದ್ಯಾಲಯದ ಎಲ್ಲಾ ಚಟುವಟಿಕೆಗಳಿಗೆ ಸಹಕರಿಸುವುದಾಗಿ ತಿಳಿಸಿದರು.

 ಕೊಡಗು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿಕುಮಾರ್ ಜಿ.ವಿ ಅವರು ಮಾತನಾಡಿ, ಕ್ರೀಡಾಕೂಟದಲ್ಲಿ ಪತ್ರಕರ್ತರ ಭಾಗವಹಿಸುವಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಭೂಮಿ, ನೆಲ, ನೀರು ಸಂರಕ್ಷಣೆ ಕುರಿತು ಕೊ.ಪ.ಸಂ ಗೌರವ ಸಲಹೆಗಾರ ಬಿ.ಜಿ. ಅನಂತಶಯನ ಅವರು ವಿಸ್ತೃತವಾದ ಮಾಹಿತಿ ನೀಡಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊ.ಪ.ಸಂ ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷ ಕಿರಿಯಮಾಡ ರಾಜ್ ಕುಶಾಲಪ್ಪ ವಹಿಸಿದ್ದರು. ಕೊ.ಪ.ಸಂ ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪತ್ರಕರ್ತ ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು.

ಆರಂಭದಲ್ಲಿ ಪೊನ್ನಂಪೇಟೆಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಘಟಕದ ಕ್ಷೇತ್ರ ಅಧೀಕ್ಷಕ ಡಾ. ಸಿ. ಪ್ರಶಾಂತ್ ಅವರು ಕ್ರೀಡಾಕೂಟ ಉದ್ಘಾಟಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು, ಕೊಡಗಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಪತ್ರಕರ್ತರಿಗಾಗಿ 100 ಮೀಟರ್ ಓಟ, ಹಗ್ಗಜಗ್ಗಾಟ, ಹ್ಯಾಂಡ್ ಬಾಲ್ ಸ್ಪರ್ಧೆಗಳ ಜೊತೆಗೆ ಹಿರಿಯ ಸದಸ್ಯರಿಗಾಗಿ ವಿಶೇಷ ನಡಿಗೆ ಸೇರಿದಂತೆ ಆನೇಕ ಸ್ಪರ್ಧೆಗಳನ್ನೂ  ಏರ್ಪಡಿಸಲಾಗಿತ್ತು. ಕ್ರೀಡಾಕೂಟದಲ್ಲಿ ದೈಹಿಕ ತರಬೇತುದಾರಾದ ಡಾ. ಈಶ್ವರ ಅವರು  ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!