
ಪೊನ್ನಂಪೇಟೆ ಏ.17: ಕೊಡವ ಅಭಿವೃದ್ಧಿ ನಿಗಮ ಘೋಷಣೆಯಾಗುವಲ್ಲಿ ಯುಕೊ ಸಂಘಟನೆಯ ಪಾತ್ರವನ್ನು ಪರಿಗಣಿಸಿ ಪೊನ್ನಂಪೇಟೆಯ ವಸಂತನಗರದ ಶ್ರೀ ಇಗ್ಗುತ್ತಪ್ಪ ಕೊಡವ ಕೂಟದ ವತಿಯಿಂದ ಕೂಟದ ಅಧ್ಯಕ್ಷರಾದ ಚೇಂದಿರ ಅಪ್ಪಯ್ಯನವರ ನೇತೃತ್ವದಲ್ಲಿ, ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪನವರನ್ನು ಚಿನ್ನದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಅರುವತೊಕ್ಲುವಿನ ಭರಣಿ ಸಭಾಂಗಣದಲ್ಲಿ ನಡೆದ ಕೂಟದ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಮಂಜು ಚಿಣ್ಣಪ್ಪನವರನ್ನು ವಿಶೇಷವಾಗಿ ಅಹ್ವಾನಿಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೂಟದ ಅಧ್ಯಕ್ಷ ಚೇಂದಿರ ಅಪ್ಪಯ್ಯ, ಎಲ್ಲರೂ ಸ್ವಂತಕ್ಕಾಗಿ ದುಡಿಯುವಲ್ಲಿ ನಿರತರಾಗಿರುವಾಗ ಸಮಾಜ ಹಾಗು ಜನಾಂಗಕ್ಕಾಗಿ ದುಡಿಯುವವರನ್ನು ಗೌರವದಿಂದ ಕಾಣಬೇಕಿದೆ. ಈ ನಿಟ್ಟಿನಲ್ಲಿ ಕೊಡವ ಜನಾಂಗದ ಏಳಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಮಂಜು ಚಿಣ್ಣಪ್ಪ ಹಾಗು ಅವರ ಬಳಗದ ಕೊಡುಗೆ ಅಪಾರವಾದುದು. ಕೊಡವ ಅಭಿವೃದ್ಧಿ ನಿಗಮದ ಯಶಸ್ಸು ಸಾಮಾನ್ಯ ವಿಷಯವಲ್ಲ, ಈ ನಿಟ್ಟಿನಲ್ಲಿ ಅವರನ್ನು ಗೌರವಿಸುವುದು ನಮಗೆ ಹೆಮ್ಮೆಯೆನಿಸಿದೆ ಎಂದು ಹೇಳಿದರು.
ಮತ್ತೊಬ್ಬ ಹಿರಿಯರಾದ ಕಲ್ಳೇಂಗಡ ಶಂಬು ಮಾತನಾಡಿ, ಕೊಡವ ಅಭಿವೃದ್ದಿ ನಿಗಮ ಘೋಷಣೆಯಾಗಿರುವುದು ನಮಗೆಲ್ಲ ಅತೀವ ಸಂತೋಷ ತಂದಿದೆ. ಈ ವಿಷಯದಲ್ಲಿ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಹಾಗು ಮಂಜು ಚಿಣ್ಣಪ್ಪನವರ ಶ್ರಮಕ್ಕೆ ಬೆಲ್ಕಟ್ಟಲಾಗದು. ನಿಗಮದ ಮೂಲಕ ಕೊಡವರ ಅಭಿವೃದ್ದಿಗೆ ಬಹಳಷ್ಟು ಕೆಲಸ ಮಾಡಬಹುದಾಗಿದೆ. ಕೊಡವರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕೂಟದ ಕಾರ್ಯದರ್ಶಿ ಹಾಗು ಕರ್ನಾಟಕ ಕೊಡವ ಸಾಹಿತ್ಯ ಅಖಾಡೆಮಿಯ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಮಾತನಾಡಿ, ನಮ್ಮಲ್ಲಿ ಮಾತನಾಡುವವರ ಸಂಖ್ಯೆ ಬಹಳಷ್ಟಿದೆ, ಆದರೆ ಜನಾಂಗಕ್ಕೆ ಕೆಲಸ ಮಾಡುವವರು ವಿರಳ. ಅಂತದ್ದರಲ್ಲಿ ಯುಕೊ ಸಂಘಟನೆ ಸದ್ದಿಲ್ಲದೆ ಹಿಡಿದ ಕೆಲಸವನ್ನು ಸಾಧಿಸಿ ತೋರಿಸಿರುವುದು ಕೊಡವರಿಗೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ನೂತನವಾಗಿ ಕೊಡವ ಅಭಿವೃದ್ದಿ ನಿಗಮ ಸ್ಥಾಪಿಸಬೇಕೆಂಬ ನಮ್ಮ ಉದ್ದೇಶದಲ್ಲಿ ಸ್ಪಷ್ಟತೆಯಿತ್ತು, ಕೆಲಸದಲ್ಲಿ ಬದ್ಧತೆಯಿತ್ತು, ಆದರೆ ಶಾಸಕ ಪೊನ್ನಣ್ಣನವರಿಂದಾಗಿ ಇಂದು ಕೊಡವ ಅಭಿವೃದ್ಧಿನಿಗಮದ ಕನಸು ನನಸಾಗಿದೆ. ಕೊಡವರು ಎಲ್ಲದರಲ್ಲಿ ರಾಜಕೀಯ ಹುಡುಕುವ ಮನಸ್ಥಿತಿಯಿಂದ ಹೊರಬಂದು ನಿಗಮವನ್ನು ಕೊಡವರ ಸಮಗ್ರ ಅಭಿವೃದ್ದಿಗೆ ಬಳಸಿಕೊಳ್ಳಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚೆಪ್ಪುಡಿರ ಸುಜು ಕರುಂಬಯ್ಯ ಸ್ವಾಗತಿಸಿ ಚಿರಿಯಪಂಡ ರಾಜಾ ನಂಜಪ್ಪ ವಂದಿಸಿದರು. ಶ್ರೀ ಇಗ್ಗುತ್ತಪ್ಪ ಕೊಡವ ಕೂಟದ ಸದಸ್ಯರು ಹಾಜರಿದ್ದರು.




