ಮೈಸೂರು ಏ 17, : ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೈದರಾಬಾದ್‌ಗೆ ಮತ್ತೊಂದು ವಿಮಾನ ಸಂಚಾರ ಮೇ 1ರಿಂದ ಆರಂಭವಾಗಲಿದೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಮಧ್ಯಾಹ್ನ 2.20ಕ್ಕೆ ಮೈಸೂರಿನಿಂದ ಹೊರಡುವ ವಿಮಾನ ಸಂಜೆ 4ಕ್ಕೆ ಹೈದರಾಬಾದ್ ತಲುಪಲಿದೆ. ಈಗಾಗಲೇ 2 ವಿಮಾನಗಳೂ ಚೆನ್ನೈ ಮತ್ತು ಹೈದರಾಬಾದ್‌ಗೆ ಹಾರಾಟ ನಡೆಸುತ್ತಿವೆ. ಹೊಸ ವಿಮಾನ ಸಂಚಾರ ಸೇವೆಯಿಂದ ನಾಗರಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ’ ಎಂದು ಹೇಳಿದ್ದಾರೆ
‘ಮುಂದಿನ ದಿನಗಳಲ್ಲಿ ಮೈಸೂರಿನಿಂದ ಹೆಚ್ಚುವರಿ ವಿಮಾನ ಸಂಚಾರ ಆರಂಭವಾಗಲಿದೆ. ವಾಯು ಸಂಚಾರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸಚಿವರೊಂದಿಗೆ ಹಲವು ಸಲ ಮಾತುಕತೆ ನಡೆಸಿದ್ದೇನೆ’ ಎಂದು ಮಾಹಿತಿ ನೀಡಿದ್ದಾರೆ.
‘ವಿಮಾನ ನಿಲ್ದಾಣ ವಿಸ್ತರಣೆಗೆ ತೊಡಕಾಗಿರುವ ಭೂ ಸ್ವಾಧೀನ ಪ್ರಕ್ರಿಯೆಯೂ ಬಹುತೇಕ ಪೂರ್ಣಗೊಂಡಿದೆ. ಮುಂದಿನ ಕೆಲವೇ ದಿನಗಳಲ್ಲಿ ಇದು ಹಸ್ತಾಂತರಗೊಂಡ ನಂತರ ಕೇಂದ್ರದ ಮೇಲೆ ಇನ್ನಷ್ಟು ಒತ್ತಡ ಹೇರಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವಿಸ್ತರಣೆಯಾದ ಬಳಿಕ ದೇಶದ ನಾನಾ ಪ್ರಮುಖ ನಗರಗಳಿಗೆ ಮೈಸೂರಿನಿಂದ ನೇರ ವಿಮಾನ ಸೇವೆ ಆರಂಭಗೊಳ್ಳಲಿದೆ. ಇದರೊಂದಿಗೆ ಈ ಭಾಗದ ಅಭಿವೃದ್ಧಿಯೂ ಸಮಾನಾಂತರವಾಗಿ ಆಗಲಿದೆ’ ಎಂದು ತಿಳಿಸಿದ್ದಾರೆ.




