ಕುಶಾಲನಗರ ಏ.05: ಜಾತಿ ಮತ ಭೇದವಿಲ್ಲದೆ ಸಮಾಜ ಹಾಗೂ ಸಮೂಹಗಳ ಜನರು ಪರಸ್ಪರ ಭಾವನಾತ್ಮಕವಾಗಿ ಬೆಸೆಯುವಲ್ಲಿ ಕ್ರೀಡಾಕೂಟಗಳು ಉತ್ತಮ ವೇದಿಕೆಗಳಾಗಿವೆ ಎಂದು ನಂಜರಾಯಪಟ್ಟಣ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ ಎಲ್. ವಿಶ್ವ ಅಭಿಪ್ರಾಯಪಟ್ಟರು.
ಅವರು ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಹೊಸಪಟ್ಟಣದ ಜೈ ಭೀಮ್ ಬ್ರದರ್ಸ್ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ 136ನೇ ಜಯಂತಿಯ ಅಂಗವಾಗಿ ಹೊಸಪಟ್ಟಣದ ಮೈದಾನದಲ್ಲಿ ಜರುಗಿದ ಕ್ರಿಕೆಟ್ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಂಜರಾಯಪಟ್ಟಣ ಪಾಕ್ಸ್ ಅಧ್ಯಕ್ಷ ಮುರಳಿ ಮಾದಯ್ಯ ಮಾತನಾಡಿ ಜಿಲ್ಲೆಯಲ್ಲಿ ಕ್ರೀಡಾಭಿಮಾನಿಗಳ ಕ್ರೀಡಾ ಆಸಕ್ತಿ ಹಾಗೂ ನಿರಂತರ ಪಾಲ್ಗೊಳ್ಳುವಿಕೆಯು ಎಲ್ಲಾ ಕೋಮಿನ ಜನರ ಸಾಮರಸ್ಯದ ಕೊಂಡಿಯಾಗಿದ್ದು, ಸಮಾಜವು ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸುತ್ತಿದೆ ಎಂದು ಬಣ್ಣಿಸಿದರು,
ಆರ್ ಕೆ. ಚಂದ್ರು ಮಾತನಾಡಿ ಇಂತಹ ಕ್ರೀಡಾಕೂಟಗಳ ಆಯೋಜನೆಗೆ ಮುಕ್ತ ವಾತಾವರಣ ಸೃಷ್ಟಿಯಾಗಿರುವುದು ಸಂತಸ ತಂದಿದೆ, ಇದು ದೀನದಲಿತರ ಆರಾದ್ಯ ಧೈವ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರಚಿತ ಸಂವಿದಾನದ ಅಡಿಯಲ್ಲಿ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಹಾಗೂ ಸಮಾನತೆಯ ಸಂಕೇತ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಜೈ ಭೀಮ್ ಲೀಗ್ ಮಾದರಿಯ ಕ್ರಿಕೇಟ್ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಪಾಲ್ಗೊಂಡಿದ್ದವು. ಟೀಂ ಸಹಾರ ಮತ್ತು ಕರೆಂಟ್ ಶಾಕರ್ಸ್ ತಂಡಗಳ ನಡುವೆ ಫೈನಲ್ ಪಂದ್ಯಾಟ ನಡೆಯಿತು. ಬಿಲಾಲ್ ಮತ್ತು ಸುಮೇರ್ ಮಾಲೀಕತ್ವದ ಸಹಾರ ತಂಡ ಪ್ರಥಮ, ಕರೆಂಟ್ ಶಾಕರ್ಸ್ ದ್ವಿತೀಯ, ವೈಲ್ಡ್ ಕ್ಯಾಟ್ ತಂಡ ತೃತೀಯ, ರೈಸಿಂಗ್ ಸ್ಟಾರ್ ನಾಲ್ಕನೇ ಬಹುಮಾನ ಪಡೆಯಿತು.
ಈ ಸಂದರ್ಭ ಜೈ ಭೀಮ್ ಬ್ರದರ್ಸ್ ನ ಅರುಣೇಶ್, ನಿತನ್, ಯೋಗೇಶ ಮನೋಜ್, ಪ್ರತಾಪ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ರಕ್ಷಿತ್ ಮಾವಜಿ, ಅನುಪಮಾ, ಪದ್ಮನಿ, ರಂಜಿತ್ ಎಂ. ಎಸ್, ಇರ್ಷಾದ್, ಮಂಜು, ಉದಯಕುಮಾರ್, ಬಿಲಾಲ್, ಕಬೀರ್, ನಡುಮನೆ ಚಿಂತು, ಮನೇಶ್, ಮ್ಯಾಥ್ಯು, ವಿಜೇಶ್ ಮತ್ತು ಅಜಯ್ ಮೋಹನ್ ಸೇರಿದಂತೆ ತಂಡಗಳ ಮಾಲೀಕರು, ಆಟಗಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




