ಕುಶಾಲನಗರ, ಮಾ.24: ಸಂಜೀವಿನಿ ಸಂತೆ ಮೇಳವು ಮಹಿಳೆಯರ ಸ್ವಾವಲಂಬಿ ಬದುಕಿಗೆ ದೊಡ್ಡ ಮಟ್ಟದ ಉತ್ತೇಜನ ನೀಡುತ್ತಿದೆ, ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಲು ಹಾಗೂ ಆರ್ಥಿಕವಾಗಿ ಸದೃಢರಾಗಲು ಈ ವೇದಿಕೆ ಅತ್ಯಂತ ಸಹಕಾರಿಯಾಗಿದೆ, ಎಂದು ಸಂಜೀವಿನಿ ಒಕ್ಕೂಟದ ಸಂತೆ ಮೇಳ ಕಾರ್ಯಕ್ರಮದಲ್ಲಿ ಗುಡ್ಡೆಹೊಸೂರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮೇಶ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಗುಡ್ಡೆಹೊಸೂರು ಗ್ರಾಮ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಸಂಜೀವಿನಿ ಸಂತೆ ಮೇಳದಲ್ಲಿ ಮಹಿಳಾ ಉದ್ಯಮಿಗಳ ಉತ್ಪನ್ನಗಳ ರಂಗು, ಗ್ರಾಮೀಣ ಮಹಿಳೆಯರ ಕೌಶಲಕ್ಕೆ ಸಾಕ್ಷಿಯಾಗಿತ್ತು,
ಸಂತೆ ಮೇಳದಲ್ಲಿ ವಿವಿಧ ಸ್ವಸಹಾಯ ಗುಂಪುಗಳ ಮಹಿಳೆಯರು ತಮ್ಮ ಸಂಘಗಳ ವತಿಯಿಂದ ಮನೆಯಲ್ಲೇ ತಯಾರಿಸಿದ ಶುಚಿಯಾದ ಉಪ್ಪಿನಕಾಯಿಗಳು.ವಿವಿಧ ರೀತಿಯ ಕುರುಕಲು ತಿಂಡಿಗಳು ಮತ್ತು ಸಾಂಪ್ರದಾಯಿಕ ಆಹಾರ ಪದಾರ್ಥಗಳು, ಕೈಮಗ್ಗದ ಬಟ್ಟೆಗಳು ಹಾಗೂ ವೈವಿಧ್ಯಮಯ ಕರಕುಶಲ ವಸ್ತುಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಾಡಿದರು.
ಗ್ರಾಮದ ಜನರು ಮೇಳಕ್ಕೆ ಭೇಟಿ ನೀಡಿ, ಮಹಿಳೆಯರು ತಯಾರಿಸಿದ ವಸ್ತುಗಳನ್ನು ಖರೀದಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಿದರು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳಾದ ಸಚಿನ್ ಅವರು ಉದ್ಘಾಟಿಸಿ, ಮೇಳದ ಯಶಸ್ಸಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಪಂಚಾಯತ್ ಕಾರ್ಯದರ್ಶಿ ಕುಮಾರಸ್ವಾಮಿ ಹಾಗೂ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ತಾರಕುಮಾರಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.





