
ನಂಜರಾಯಪಟ್ಟಣ, ಮಾ.9: ನಂಜರಾಯಪಟ್ಟಣ ಸಮೀಪ ಬಾಳೆಗುಂಡಿ ಹಾಡಿ ನಿವಾಸಿ ಜಲಜಾಕ್ಷಿ ಅವರು ಇಂದು ಮೀನುಕೊಲ್ಲಿ ಅರಣ್ಯ ಸಮೀಪ ಆನೆ ದಾಳಿಗೆ ಸಿಲುಕಿ ಮೃತ ಪಟ್ಟಿದ್ದರು.
ಮಾಹಿತಿ ತಿಳಿದ ಕೂಡಲೇ ವಿಧಾನಸಭಾ ಕಲಾಪದಲ್ಲಿದ್ದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ವಿಧಾನಸಭಾ ಕಲಾಪವನ್ನು ಮೊಟಕುಗೊಳಿಸಿ ಕೂಡಲೇ ವಾಲ್ನೂರಿನ ಮೃತರ ನಿವಾಸಕ್ಕೆ ಭೇಟಿನೀಡಿ ಅಕಾಲಿಕ ಮರಣದ ಆಘಾತದಲ್ಲಿದ್ದ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಆನಂತರ ಅರಣ್ಯ ಮತ್ತು ಸ್ಥಳೀಯ ಇಲಾಖೆಯ ಅಧಿಕಾರಿಗಳೊಂದಿಗೆ ಆನೆ ದಾಳಿಯ ಕುರಿತು ಸಂಪೂರ್ಣ ಮಾಹಿತಿ ಪಡೆದ ಶಾಸಕರು ಕುಟುಂಬದ ಪ್ರಮುಖರಿಗೆ ಮೊದಲನೇ ಹಂತದ 5. ಲಕ್ಷ ಮೊತ್ತದ ಪರಿಹಾರ ಚೆಕ್ ಅನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ವಿತರಿಸಿದರು. ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ಕಾಡಾನೆಗಳ ಹಾವಳಿ ಮತ್ತು ಆನೆ ಮಾನವ ಸಂಘರ್ಷವನ್ನು ಸಂಪೂರ್ಣವಾಗಿ ತಡೆಗಟ್ಟಲು ಬೇಕಾದ ರೈಲ್ವೆ ಬ್ಯಾರಿಗೇಡ್, ಟ್ರೆಂಚ್ ಮೊದಲಾದ ರಕ್ಷಣೆ ಕಾರ್ಯಗಳನ್ನು ಶೀಘ್ರವೆ ಜಾರಿಗೆ ತರುವಂತೆ ಮತ್ತು ಇಂದು ದಾಳಿ ನಡೆಸಿದ ಆನೆಯನ್ನು ಆದಷ್ಟು ಬೇಗ ಸೆರೆ ಹಿಡಿಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು
.ಕೊಡಗಿನಲ್ಲಿ ಮಾನವ ಹಾಗೂ ವನ್ಯ ಜೀವಿಗಳ ನಡುವಿನ ಸಂಘರ್ಷ ಪರಿಹರಿಸುವ ಕುರಿತಾಗಿ ಶಾಸಕರ ವಿಶೇಷ ಆಸಕ್ತಿ

ಇತ್ತೀಚೆಗೆ ಕೊಡಗು ಅರಣ್ಯ ವೃತ್ತದ ಮಡಿಕೇರಿಯಲ್ಲಿರುವ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಇರುವ ಕಂಟ್ರೋಲ್ ಅಂಡ್ ಕಮಾಂಡ್ ರೂಮಿನಲ್ಲಿ ವನ್ಯಜೀವಿಗಳಿಂದ ಬೆಳೆಹಾನಿ ನಷ್ಟ ಹಾಗೂ ವನ್ಯಜೀವಿಗಳ ಚಲನವಲನಗಳ ಬಗ್ಗೆ ಆನ್ಲೈನಲ್ಲಿ ಮಾಹಿತಿ ಮತ್ತು ವನ್ಯಜೀವಿಗಳ ಚಲನವಲನಗಳ ಬಗ್ಗೆ ಸಂಬಂಧಪಟ್ಟ ಗ್ರಾಮಸ್ಥರಿಗೆ ಮಾಹಿತಿ ನೀಡುವ ಕುರಿತು ಇರುವ ಅಪ್ಲಿಕೇಶನ್ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆಯುವಲ್ಲಿ ಆಸಕ್ತಿ ವಹಿಸಿದ್ದರು.




