
ವಿರಾಜಪೇಟೆ. ಮಾ.01 : ಕೊಡಗು ಗೌಡ ಸಮಾಜಗಳ ಒಕ್ಕೂಟ ಹಾಗೂ ಕೊಡಗಿನ ಎಲ್ಲಾ ಗೌಡ ಸಮಾಜಗಳ ವತಿಯಿಂದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರನ್ನು ವಿರಾಜಪೇಟೆಯಲ್ಲಿ ಸನ್ಮಾನಿಸಲಾಯಿತು.
ಕೊಡಗಿನ ಗೌಡ ಸಮಾಜಗಳಿಗೆ ಧನಸಹಾಯ ಸೇರಿದಂತೆ ಮಡಿಕೇರಿಯ ಕೊಡಗು ಗೌಡ ಸಮಾಜಕ್ಕೆ ಮದೆನಾಡಿನಲ್ಲಿ ಸರಕಾರದ ವತಿಯಿಂದ ಆರು ಎಕರೆ ಜಮೀನ ಮಂಜೂರಾತಿ ಹಾಗೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಶಾಸಕರಿಗೆ ಕೃತಜ್ಞತಾ ಪೂರ್ವಕವಾಗಿ ಈ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಕೊಡಗು ಗೌಡ ಸಮಾಜಕ್ಕೆ ಸರ್ಕಾರಿ ಜಮೀನನ್ನು ಮಂಜೂರು ಮಾಡಿಸಿ ಕೊಟ್ಟಿರುವುದು ಇಲ್ಲಿಯ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಇತರ ಚಟುವಟಿಕೆಗಳಿಗೆ ಪೂರಕವಾಗಲಿದೆ. ಹಲವು ಸಮಯದಿಂದ ಗೌಡ ಸಮುದಾಯದವರು ಈ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದು ಈಗ ಮಂಜೂರಾತಿ ದೊರೆತಿದ್ದು ಈ ಸಂದರ್ಭದಲ್ಲಿ ಜಾಗ ಮಂಜೂರು ಮಾಡಲು ಸಹಕರಿಸಿದ ಮುಖ್ಯಮಂತ್ರಿಗಳಿಗೆ, ಮಾನ್ಯ ಕಂದಾಯ ಸಚಿವರಿಗೆ ಹಾಗೂ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು.
ಸಮಾಜದ ಎಲ್ಲಾ ಕಾರ್ಯ ಚಟುವಟಿಕೆಗಳು ನಾಡಿನ ಏಳಿಗೆಗೆ ಹಾಗೂ ಸಮಾಜದ ಸಂಸ್ಕೃತಿ ಹಾಗೂ ಸಾಹಿತ್ಯದ ಅಭಿವೃದ್ಧಿಗೆ ಪೂರಕವಾಗಿರಲಿ ಎಂದು ಈ ಸಂದರ್ಭ ಶಾಸಕರು ಆಶಿಸಿದರು.ಮುಂದಿನ ದಿನಗಳಲ್ಲಿ ಸಮುದಾಯದ ಅಭಿವೃದ್ಧಿಯಲ್ಲಿ ಇನ್ನಷ್ಟು ಸಕ್ರಿಯವಾಗಿ ಕೆಲಸ ಮಾಡುವುದಾಗಿ ಶಾಸಕರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ್ ಕರಂದ್ಲಾಜೆ,ಕೊಡಗು ಅರೆಭಾಷೆ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ, ವಿರಾಜಪೇಟೆ ಗೌಡ ಸಮಾಜದ ಅಧ್ಯಕ್ಷರಾದ ಮುಕ್ಕಾಟಿ ವಾಸು ಗಣಪತಿ, ಒಕ್ಕೂಟದ ಉಪಾಧ್ಯಕ್ಷರಾದ ಡಾ. ರಾಜೇಶ್ ಕಾರ್ಯದರ್ಶಿ ಪೇರಿಯನ ಉದಯ , ಅಂಬೆಕಲ್ ನವೀನ್, ಪಕ್ಷದ ಮುಖಂಡರಾದ ರಮಾನಾಥ್ ಬೇಕಲ್, ಗೌಡ ಸಮಾಜದ ಒಕ್ಕೂಟದ ಸರ್ವ ಸದಸ್ಯರು ಹಾಗೂ ಗೌಡ ಸಮುದಾಯದ ಅಧ್ಯಕ್ಷರುಗಳು, ಸದಸ್ಯರುಗಳು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.





