ಕುಶಾಲನಗರ ಜ.12: ಮೈಸೂರಿನಲ್ಲಿರುವ ಕೇಂದ್ರ ಸರ್ಕಾರದ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನಾ ಪರಿಷತ್ ಅಡಿಯಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಜೊತೆಗೆ ಕೊಡಗು ವಿಶ್ವವಿದ್ಯಾಲಯವು ೩೦ ಡಿಸೆಂಬರ್ ೨೦೨೫ ರಂದು ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ.
ಮೂಲತಃ ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಂಶೋಧನಾ ಕೇಂದ್ರವಾಗಿ ಕಾರ್ಯನಿರ್ವಹಿಸುವ ಉದ್ದೇಶದೊಂದಿಗೆ ಆರಂಭಗೊಂಡಿರುವ ಈ ಉನ್ನತ ಸಂಸ್ಥೆಯ ಜೊತೆಗೆ ಮುಂದಿನ ದಿನಗಳಲ್ಲಿ ಕೊಡಗು ವಿಶ್ವವಿದ್ಯಾಲಯವು ಪರಸ್ಪರ ಸಂಶೋಧನೆ, ಬೋಧನೆ, ಕೌಶಲ್ಯ, ಅಭಿವೃದ್ಧಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ, ತಂತ್ರಜ್ಞಾನ ವಿನಿಮಯ ಮಾಡಿಕೊಂಡು ಕೊಡಗು ವಿಶ್ವವಿದ್ಯಾಲಯದ ಅಧ್ಯಾಪಕ ವೃಂದದವರಿಗೆ ಮತ್ತು ವಿದ್ಯಾರ್ಥಿಗಳಿಗೆ ಪೂರಕವಾಗಿರುವ ಸೌಲಭ್ಯಗಳನ್ನು ಹಾಗೂ ಹಲವಾರು ರೀತಿಯ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವ ಮುಖ್ಯ ಉದ್ದೇಶದಿಂದ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರ ಅವರು ಹಾಗೂ ಮೈಸೂರಿನ ಸಿಎಫ್‌ಟಿಆರ್‌ಐ ಸಂಸ್ಥೆಯ ನಿರ್ದೇಶಕರಾದ ಡಾ. ಪಿ. ಗಿರಿಧರ್ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಈ ಸಂಸ್ಥೆಯ ಜೊತೆಗಿನ ಮಹತ್ವದ ಒಪ್ಪಂದದಿಂದ ಕೊಡಗು ವಿಶ್ವವಿದ್ಯಾಲಯದ ವ್ಯಾಪ್ತಿಯ ವಿದ್ಯಾರ್ಥಿ ಸಮುದಾಯವು ಆಹಾರ ತಂತ್ರಜ್ಞಾನ, ಕೈಗಾರಿಕೆ, ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಉನ್ನತ ಜ್ಞಾನ ಸಂಪಾದಿಸಲು ಅನುಕೂಲವಾಗುತ್ತದೆ. ಹಾಗೆಯೇ ಆಹಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ವಿನೂತನ ಸಂಶೋಧನೆಗೆ ಹೊಸ ದಿಕ್ಕು, ಹೊಸ ಅವಿಷ್ಕಾರದ ಜೊತೆಗೆ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗಲಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರ ಅವರು ತಿಳಿಸಿದ್ದಾರೆ.
ಕೊಡಗು ವಿಶ್ವವಿದ್ಯಾಲಯವು ಪರಸ್ಪರ ಸಂಶೋಧನೆ, ಬೋಧನೆ, ಕೌಶಲ್ಯಭಿವೃದ್ಧಿ, ಔದ್ಯೋಗಿಕ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ, ತಂತ್ರಜ್ಞಾನ ವಿನಿಮಯ ಮಾಡಿಕೊಂಡು ಕೊಡಗು ವಿಶ್ವವಿದ್ಯಾಲಯದ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ವಾಗುವ ಹಲವಾರು ರೀತಿಯ ಕಾರ್ಯ ಚಟುವಟಿಕೆಗಳನ್ನು ಕೈಗೊಂಡಿದೆ. ಕರ್ನಾಟಕದ ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆ ಮತ್ತು ಕರ್ನಾಟಕ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಬೆಂಗಳೂರಿನ ಫೋರ್ಕ್ ಟೆಕ್ನಾಲಜಿಸ್ ಸಹಯೋಗದೊಂದಿಗೆ ಕೊಡಗು ವಿಶ್ವವಿದ್ಯಾಲಯದ ಅಧ್ಯಾಪಕರುಗಳಿಗೆ ಕೌಶಲಾಭಿವೃದ್ಧಿ ಕಾರ್ಯಾಗಾರಗಳನ್ನು ಆಯೋಜಿಸಿದೆ. ಅಷ್ಟೇ ಅಲ್ಲದೇ ಧಾರವಾಡದ ಬಹು ಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರ, ಭಾರತ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ ಹಾಗೂ ಪ್ರಾಜೆಕ್ಟ್ ಕಾವೇರಿ ಎಂಬ ಹೆಸರಿನಲ್ಲಿ ಕೊಡಗು ಅಂಚೆ ಇಲಾಖೆಯ ಜೊತೆಗಿನ ಒಡಂಬಡಿಕೆ, ತಮಿಳುನಾಡಿನ ತಂಜಾವೂರಿನಲ್ಲಿರುವ ಭಾರತ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆ, ಐಸಿಎಆರ್-ಐಐಎಸ್‌ಆರ್, ಕೋಜಿಕೊಡೆ, ಕೇರಳ ಹಾಗೂ ಐಬಿಎಂ ಅನುದೀಪ್ ಫೌಂಡೇಶನ್, ಬೆಂಗಳೂರು ಮೊದಲಾದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಜೊತೆಗೆ ಕೊಡಗು ವಿಶ್ವವಿದ್ಯಾಲಯವು ಈಗಾಗಲೇ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ.




