
ಕೂಡಿಗೆ ಏ.07: ಸೈನಿಕ ಶಾಲೆ ಕೊಡಗಿನಲ್ಲಿ 2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭವನ್ನು ಶಾಲೆಯ ಕುವೆಂಪು ವಿವಿದೊದ್ದೇಶ ಸಭಾಂಗಣದಲ್ಲಿ ಅತ್ಯಂತ ಹೆಮ್ಮೆ ಮತ್ತು ಗಾಂಭೀರ್ಯದಿಂದ ಆಯೋಜಿಸಲಾಗಿತ್ತು.
ಶಾಲೆಯ ಪ್ರಾಚಾರ್ಯರಾದ ಕರ್ನಲ್ ಅಮರ್ ಜೀತ್ ಸಿಂಗ್, ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಉಪ ಪ್ರಾಚಾರ್ಯರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ಮತ್ತು ಹಿರಿಯ ಶಿಕ್ಷಕರಾದ ಎನ್. ವಿಬಿನ್ ಕುಮಾರ್ ಅವರು ಶಾಲೆಯ ಹಿರಿಯ ವಿದ್ಯಾರ್ಥಿಗಳ ನಾಯಕರಿಗೆ ಭುಜದ ಮೇಲಿನ ಬ್ಯಾಡ್ಜಗಳನ್ನ ಅನಾವರಣಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಜವಾಬ್ದಾರಿಗಳನ್ನು ಹಸ್ತಾಂತರಿಸಿದರು.
ಶಾಲಾ ನಾಯಕನಾಗಿ ಕೆಡೆಟ್ ಚಿನ್ಮಯ ಖನವಲ್ಲಿ, ಶಾಲೆಯ ಶಿಸ್ತಿನ ನಾಯಕನಾಗಿ ಕೆಡೆಟ್ ಭರತ್ ಚೌಧರಿ, ಕ್ರೀಡಾ ನಾಯಕನಾಗಿ ಕೆಡೆಟ್ ಸೋಹಮ್ ಬಾಗೇವಾಡಿ, ಶೈಕ್ಷಣಿಕ ವಿಭಾಗದ ನಾಯಕನಾಗಿ ಕೆಡೆಟ್ ಅಕ್ಷತ್ ಗೈರೋಲಾ, ಸಾಂಸ್ಕೃತಿಕ ನಾಯಕನಾಗಿ ಕೆಡೆಟ್ ಗಿತೇಶ್ ಆರ್, ಭೋಜನಾಲಯದ ನಾಯಕನಾಗಿ ಕೆಡೆಟ್ ಪೂರ್ವಿಕ್ ಆರ್, ಐಟಿ ನಾಯಕನಾಗಿ ಕೆಡೆಟ್ ನೀರಜ್ ಧರಣಿ ಆಯ್ಕೆಯಾಗಿ ಶಾಲೆಯ ಮೌಲ್ಯಗಳು, ಶಿಸ್ತು ಮತ್ತು ಗೌರವವನ್ನು ಎತ್ತಿಹಿಡಿಯುವುದಾಗಿ ಪ್ರತಿಜ್ಞೆ ಮಾಡಿದರು.
ಇದೇ ಸಂದರ್ಭ ವಿವಿಧ ನಿಲಯಗಳ ನಾಯಕರ ನೇಮಕಾತಿಗಳನ್ನು ಸಹ ಮಾಡಲಾಯಿತು. ವಿವಿಧ ನಿಲಯಗಳ ನಿಲಯ ಶಿಕ್ಷಕರು ಶಾಲೆಯ ಪ್ರಾಚಾರ್ಯರೊಂದಿಗೆ ಸೇರಿ ವಿದ್ಯಾರ್ಥಿಗಳಿಗೆ ಹೆಗಲ ಬ್ಯಾಡ್ಜ್ಗಳನ್ನು ಧರಿಸಿ ಅವರವರ ನಿಲಯಗಳ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು.
ನಂತರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಾಚಾರ್ಯರಾದ ಕರ್ನಲ್ ಅಮರ್ ಜೀತ್ ಸಿಂಗ್ ರವರು ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತ್ತು ನಾಯಕತ್ವ ಹಾಗೂ ಜವಾಬ್ದಾರಿಯ ಸಾರವನ್ನು ಒತ್ತಿ ಹೇಳಿದರು. ವಿದ್ಯಾರ್ಥಿಗಳು ಕರ್ತವ್ಯನಿಷ್ಠರಾಗಿ ತಮ್ಮ ‘ನಾಯಕತ್ವ ಧರ್ಮ’ವನ್ನು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ನಿರ್ವಹಿಸುವಂತೆ ಅವರು ಕರೆ ನೀಡಿದರು. ಜವಾಬ್ದಾರಿಯು ಕೇವಲ ಸೌಲಭ್ಯವಲ್ಲ, ಅದೊಂದು ಕರ್ತವ್ಯ ಎಂದು ತಿಳಿಸಿದ ಅವರು, ಆಯ್ಕೆಯಾದ ನೂತನ ನಾಯಕರು ಮುಂಚೂಣಿಯಲ್ಲಿ ನಿಂತು ಶಾಲೆಯ ಎಲ್ಲಾ ಚಟುವಟಿಕೆಗಳನ್ನು ಮುನ್ನಡೆಸಬೇಕು. ಸಮಗ್ರತೆಯನ್ನು ಕಾಪಾಡಿಕೊಂಡು ಕೊಡಗಿನ ಸೈನಿಕ ಶಾಲೆಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಪ್ರೋತ್ಸಾಹಿಸಿದರು. ನಿಜವಾದ ನಾಯಕರು ಮಾದರಿಯಾಗಿ ನಿಂತು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾರೆಂದು ನೆನಪಿಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೆಮ್ಮೆ ಮತ್ತು ನವಚೈತನ್ಯದೊಂದಿಗೆ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಬೋಧಕ – ಭೋಧಕೇತರ ಸಿಬ್ಬಂದಿ, ಎನ್ಸಿಸಿ ಸಿಬ್ಬಂದಿ, ಧೈಹಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





