
ಕುಶಾಲನಗರ, ಜ 20: ಪ್ರತಿ ವರ್ಷ ಜನವರಿ 15ರಂದು ಅಧಿಕೃತವಾಗಿ ಆಚರಿಸಲಾಗುವ ಸೇನಾ ದಿನಾಚರಣೆಯನ್ನು ಸೈನಿಕ ಶಾಲೆ ಕೊಡಗಿನಲ್ಲಿ 19 ಜನವರಿ 2026ರಂದು ಹೆಮ್ಮೆ ಹಾಗೂ ದೇಶಭಕ್ತಿಯ ಉತ್ಸಾಹದೊಂದಿಗೆ ಆಚರಿಸಲಾಯಿತು. ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವಲ್ಲಿ ತಮ್ಮ ಜೀವನವನ್ನುಸಮರ್ಪಿಸಿರುವ ಭಾರತೀಯ ಸೇನೆಯ ಶೌರ್ಯ, ತ್ಯಾಗಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದೇಶಕ್ಕಾಗಿ ತಮ್ಮ ಶ್ರೇಷ್ಠತೆಯೊಂದಿಗೆ ತ್ಯಾಗ ಹಾಗೂ ಸಮರ್ಪಣಾ ಮನೋಭಾವವನ್ನು ಪ್ರದರ್ಶಿಸಿದ ವೀರಸೈನಿಕರ ಸ್ಮರಣಾರ್ಥ ಶಾಲೆಯಲ್ಲಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಮೊದಲಿಗೆ ಕಟಾರಿ ನಿಲಯದ ವಿದ್ಯಾರ್ಥಿಗಳು ಪ್ರೇರಣಾದಾಯಕ ಐಎಂಎ(IMA) ಗೀತೆಯ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ದಿನದ ಸುಭಾಷಿತ, ಕವನವಾಚನ ಹಾಗೂ ಭಾರತೀಯ ಸೇನೆ ಮತ್ತು ಅದರ ಕಾರ್ಯಾಚರಣೆಗಳ ವಿವಿಧ ಅಂಶಗಳನ್ನು ವಿವರಿಸುವ ಕುರಿತು ಹಲವು ದೃಷ್ಯಾವಳಿಗಳ ಮೂಲಕ ಪ್ರಾತ್ಯಕ್ಷಿಕೆ ನೀಡಿದರು.
ಕೆಡೆಟ್ ದಾನಿಷ್ ಅಹ್ಮದ್ ಹಾಗೂ ಕೆಡೆಟ್ ನಿಶಾಂತ್ ನಾರಾಯಣ್ ಅವರು ನೀಡಿದ ಈ ಪ್ರಾತ್ಯಕ್ಷಿಕೆಯು ಯುದ್ಧ ಸಂದರ್ಭದಲ್ಲಿ ಹಾಗೂ ಶಾಂತಿಯ ಸಂದರ್ಭದಲ್ಲೆರಡರಲ್ಲೂ ಭಾರತೀಯ ಸೇನೆಯ ಪಾತ್ರದ ಕುರಿತು ಅಮೂಲ್ಯಮಾಹಿತಿ ನೀಡಿದ್ದು, ಯುದ್ಧಭೂಮಿಯ ಹೊರತಾಗಿ ನಮ್ಮ ಹೆಮ್ಮೆಯ ಸೇನೆಯ ಬಹುಮುಖ ಜವಾಬ್ದಾರಿಗಳನ್ನುವಿದ್ಯಾರ್ಥಿಗಳಿಗೆ ಅರ್ಥೈಸಿದರು.
ಈ ಸಂದರ್ಭ 11ನೇ ತರಗತಿಯ ಕೆಡೆಟ್ ಸಾಮ್ರಾಟ್ ಅವರು ರಚಿಸಿ, ನಿರ್ದೇಶಿಸಿದ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಪ್ರಸ್ತುತ ಕಿರು ನಾಟಕದಲ್ಲಿ ಪರಮ ವೀರ ಚಕ್ರ ಪುರಸ್ಕೃತ ಗ್ರೆನೇಡಿಯರ್ ಸುಬೇದಾರ್ ಮೇಜರ್ ಗೌರವ ಕ್ಯಾಪ್ಟನ್ ಯೋಗೇಂದ್ರಸಿಂಗ್ ಯಾದವ್ ರವರ ಜೀವನದ ವಿವಿಧ ಪ್ರಮುಖ ಘಟನಾವಳಿಯನ್ನು ಪ್ರದರ್ಶಿಸಿ, ಅವರ ಧೈರ್ಯ, ಸ್ಥೈರ್ಯ ಮತ್ತು ಸಮರ್ಪಣಾ ಮನೋಭಾವವು ಪ್ರೇಕ್ಷಕರನ್ನು ಪ್ರೇರೇಪಿಸಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ರವರು ಭಾರತೀಯ ಸೇನೆಗೆ ಹೆಸರುವಾಸಿಯಾದ ಬದ್ಧತೆ, ಚಾರಿತ್ರ್ಯ, ಅಖಂಡತೆ, ನಿಷ್ಠೆ, ನೈತಿಕ ಧೈರ್ಯ ಮತ್ತು ಶಿಸ್ತು ಎಂಬಮೂಲ್ಯಗಳನ್ನು ಒತ್ತಿ ಹೇಳಿ, ಈ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್, ಉಪಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮಹಮದ್ ಷಾಜಿ, ಹಿರಿಯ ಶಿಕ್ಷಕರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು,ಭಾರತೀಯ ಸೇನೆ ಹಾಗೂ ಅದರ ವೈಭವಶಾಲಿ ಪರಂಪರೆಯ ಗೌರವಕ್ಕೆ ಅರ್ಥಪೂರ್ಣ ನಮನ ಸಲ್ಲಿಸಲಾಯಿತು.













