
ಕುಶಾಲನಗರ ಜ.19: ಶ್ರೀ ನಾನಕ ಝಿರಾ ಸಾಹೇಬ್ ಫೌಂಡೇಷನ್ ವತಿಯಿಂದ ಗುರುನಾನಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ.ಸರ್ದಾರ್ ಜೋಗಾಸಿಂಗ್ 93ನೇ ಜನ್ಮ ದಿನದ ನಿಮಿತ್ತ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಅವರಿಗೆ ಬೀದರ್‌ನ ಗುರುನಾನಕ ದೇವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶೈಕ್ಷಣಿಕ ಮತ್ತು ಕೃಷಿಯಲ್ಲಿನ ಸೇವೆಗಾಗಿ ಉನ್ನತ ಶಿಕ್ಷಣ ಮತ್ತು ಕೃಷಿ ದಾರ್ಶನಿಕ ಸರ್ದಾರ್ ಜೋಗಾಸಿಂಗ್ ಕಲ್ಯಾಣ ಕರ್ನಾಟಕ ಪ್ರಶಸ್ತಿ-2026 ಪ್ರಶಸ್ತಿ ನೀಡಿ ಗೌರವಿಸಿದೆ.
ಸಮಾಜದಲ್ಲಿ ದೀನ-ದುರ್ಬಲರಿಗೆ ಸಹಾಯ ಮಾಡುವ ಸೇವಾಗುಣ, ಪ್ರಾಮಾಣಿಕತೆಯಿಂದ ಸಮಾಜಕ್ಕೆ ದಾರಿ ತೋರಿಸುವಂತಹ ನಿಜವಾದ ನಾಯಕತ್ವ ಗುಣದ ಮೂಲಕ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಗುರುತಿಸಿ, ಸಮಾಜ ಸೇವಕರಿಗೆ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡುವ ಉದ್ದೇಶದಿಂದ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತದೆ.
ಶೈಕ್ಷಣಿಕ ಮತ್ತು ಕೃಷಿ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಪ್ರೊ. ಅಶೋಕ ಸಂಗಪ್ಪ ಆಲೂರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಗ್ರಾಮೀಣಾಭಿವೃದ್ಧಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಸುಮಾರು ಎರಡೂವರೆ ದಶಕಗಳ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ಪ್ರತಿಷ್ಠಿತ ಕೃಷಿ ಧಾರವಾಡದ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನದಲ್ಲಿ ಬಿ.ಎಸ್ಸಿ (B.Sc) ಮತ್ತು ಎಂ.ಎಸ್ಸಿ (M.Sc) ಪದವಿಗಳನ್ನು ಪಡೆದುಕೊಂಡು, ತದನಂತರ ಮಣ್ಣು ವಿಜ್ಞಾನದಲ್ಲಿ ಪಿಹೆಚ್‌ಡಿ ಪದವಿಯನ್ನು ಗಳಿಸಿ, ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯ ಬಗ್ಗೆ ಆಳವಾದ ಅನುಭವವನ್ನು ಪಡೆದುಕೊಂಡಿದ್ದಾರೆ. ಅಮೆರಿಕ, ಜರ್ಮನಿ, ಕೀನ್ಯಾ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಸಂಚರಿಸಿ, ಅಲ್ಲಿನ ಕೃಷಿ ಪದ್ಧತಿ ಮತ್ತು ಶೈಕ್ಷಣಿಕ ನೀತಿಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. 10ಕ್ಕೂ ಹೆಚ್ಚು ಉನ್ನತ ಉದ್ಯಮಶೀಲತಾ ಮತ್ತು ನಿರ್ವಹಣಾ ತರಬೇತಿಗಳನ್ನು ಪಡೆದು ಜಾಗತಿಕ ಮಟ್ಟದ ಅನುಭವವನ್ನು ತಮ್ಮದಾಗಿಸಿಕೊಂಡಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಗೌರವಗಳಿಗೆ ಭಾಜನರಾಗಿರುವ ಕೊಡಗು ಕುಲಪತಿಗಳಾಗಿರುವ ವಿಶ್ವವಿದ್ಯಾಲಯದ ಪ್ರೊ. ಅಶೋಕ ಸಂಗಪ್ಪ ಆಲೂರ ಅವರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಫೆಲೋಶಿಪ್ ಪ್ರಶಸ್ತಿ ಕೂಡ ಲಭಿಸಿದೆ.




