ಕುಶಾಲನಗರ, ಮಾ.17: ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನ ಕಾರ್ಯವೈಖರಿಯನ್ನು ಅಭಿನಂದಿಸಿ ಕುಶಾಲನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕುಶಾಲನಗರ ಶಾಖೆಯ ವತಿಯಿಂದ ಗೋಡೆ ಗಡಿಯಾರವನ್ನು ಉಡುಗೊರೆಯಾಗಿ ನೀಡಲಾಯಿತು.
ನಿನ್ನೆ ಸೋಮವಾರ ಸಂಜೆ ಬ್ಯಾಂಕಿನ ವ್ಯವಸ್ಥಾಪಕ ರಾಮರಾವ್ ಅವರು ಕುಶಾಲನಗರ ಚೇಂಬರ್ಸ್ ಆಫ್ ಕಾಮರ್ಸ್ ಅಧ್ಯಕ್ಷರಾದ ಕೆ ಎಸ್ ನಾಗೇಶ್ ಮತ್ತು ಅವರ ತಂಡಕ್ಕೆ ಗಡಿಯಾರವನ್ನು ಹಸ್ತಾಂತರಿಸಿ ಮಾತನಾಡಿ ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ಸದಾ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡು ವರ್ತಕರ ಪರವಾಗಿ ನಿಂತಿರುವುದನ್ನು ನಿಮ್ಮೆಲ್ಲರ ಹಾಗೆ ನಾವು ಗಮನಿಸಿದ್ದೇವೆ. ಚೇಂಬರ್ ಆಫ್ ಕಾಮರ್ಸ್ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವೆಯನ್ನು ಮಾಡಲು ಒಳ್ಳೆಯ ಸಮಯ ಬರಲಿ ಎಂದು ಗಡಿಯಾರ ನೀಡಿದ್ದೇವೆ ಎಂದರು.
ಗಡಿಯಾರ ಸ್ವೀಕರಿಸಿ ಮಾತನಾಡಿದ ಕೆ.ಎಸ್. ನಾಗೇಶ್, ಇಂತಹ ವಿಶಾಲ ಹೃದಯದ ದಾನಿಗಳಿಂದ ಸೇವೆ ಮಾಡುವ ಸ್ಪೂರ್ತಿ ಹೆಚ್ಚಾಗುತ್ತದೆ ಎಂದರು.
ಈ ಸಂದರ್ಭ ಚೇಂಬರ್ ಆಫ್ ಕಾಮರ್ಸ್ ನ ಕಾರ್ಯದರ್ಶಿ ಚಿತ್ರ ರಮೇಶ್, ಪದಾಧಿಕಾರಿಗಳಾದ ಎಸ್.ಕೆ.ಸತೀಶ್, ಪಿ.ಎಂ.ಮೋಹನ್, ವಿಮಲ್ ಜೈನ್, ಪೈಯಾಜ್ ಅಹಮದ್ ಮತ್ತಿತ್ತರು ಹಾಜರಿದ್ದರು.




